ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಬಂಧನ ಬಿಡುಗಡೆ

| Published : Jun 29 2024, 12:38 AM IST

ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಬಂಧನ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರು.ಗಳ ಹಗರಣ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ - ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ಶುಕ್ರವಾರ ಬಂಧಿಸಿ ಬಿಡುಗಡೆ ಮಾಡಿದರು.

ರಾಮನಗರ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರು.ಗಳ ಹಗರಣ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ - ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ಶುಕ್ರವಾರ ಬಂಧಿಸಿ ಬಿಡುಗಡೆ ಮಾಡಿದರು.

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಜಮಾಯಿಸಿದ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗುತ್ತಾ ಧರಣಿ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿಯವರು ಮನವಿ ಸ್ವೀಕರಿಸಲು ಬಂದಾಗ ಹೋರಾಟಗಾರರು ಜಿಲ್ಲಾಧಿಕಾರಿಗಳೇ ಆಗಮಿಸಬೇಕೆಂದು ಪಟ್ಟು ಹಿಡಿದರು. ಮಧ್ಯಾಹ್ನ 1 ಗಂಟೆಯಾದರು ಜಿಲ್ಲಾಧಿಕಾರಿ ಅವಿನಾಶ್ ಮನವಿ ಪಡೆಯಲು ಆಗಮಿಸಲೇ ಇಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿಯೊಳಗೆ ನುಗ್ಗಲು ಪ್ರಯತ್ನಿಸಿದರು.

ಬಂದೋಬಸ್ತಿನಲ್ಲಿದ್ದ ಪೊಲೀಸರು ಕಚೇರಿ ಗೇಟ್‌ಗಳನ್ನು ಬಂದ್ ಮಾಡಿ ಪ್ರತಿಭಟನಾಕಾರರು ಒಳನುಗ್ಗದಂತೆ ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆದು ಮಾತಿನ ಚಕಮಕಿಯೂ ಜರುಗಿತು. ಕೊನೆಗೆ ಪ್ರತಿಭಟನಾಕಾರರು ಅಲ್ಲಿಯೇ ಧರಣಿ ಕುಳಿತು ಜಿಲ್ಲಾಧಿಕಾರಿ ಅವಿನಾಶ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಪೊಲೀಸ್ ಅಧಿಕಾರಿಗಳು ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ರುದ್ರದೇವರು, ಮುರಳೀಧರ್, ಚಂದ್ರಶೇಖರ್ ರೆಡ್ಡಿ ಸೇರಿದಂತೆ ಅನೇಕರನ್ನು ಪೊಲೀಸ್ ವಾಹನಕ್ಕೆ ತುಂಬಿದರು. ಇದರಿಂದ ಸಿಡಿದೆದ್ದ ಕಾರ್ಯಕರ್ತರು ಪೊಲೀಸ್ ವಾಹನ ಮುಂದೆ ಸಾಗದಂತೆ ಅಡ್ಡಲಾಗಿ ಕುಳಿತು ತಡೆದರು. ಅವರನ್ನು ತೆರವುಗೊಳಿಸಲು ಪೊಲೀಸರು ಪ್ರಯತ್ನಿಸಿದರಾದರು ಸಾಧ್ಯವಾಗಲಿಲ್ಲ. ಕೊನೆಗೆ ಬಿಜೆಪಿ ಮುಖಂಡರಿದ್ದ ವಾಹನವನ್ನು ಚಾಲಕ ರಿವರ್ಸ್ ಪಡೆದುಕೊಂಡು ಮತ್ತೊಂದು ಗೇಟಿನ ಮೂಲಕ ರಾಮನಗರ ಪುರ ಪೊಲೀಸ್ ಠಾಣೆಗೆ ಕರೆದೊಯ್ದರು.

ಇನ್ನುಳಿದ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮುಂದುವರೆಸಿ ಜಿಲ್ಲಾಧಿಕಾರಿ ಅವಿನಾಶ್ ಅವರು ತಾವೊಬ್ಬ ಸರ್ಕಾರಿ ಅಧಿಕಾರಿ ಎಂಬುದನ್ನು ಮರೆಯಬಾರದು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸದೆ ಅವಮಾನ ಮಾಡಿದ್ದಾರೆ. ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧವೇ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು. ಅನುದಾನವನ್ನು ಚುನಾವಣಾ ನೀತಿ ಸಂಹಿತೆಯ ಅವಧಿಯಲ್ಲಿಯೇ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಚಂದ್ರಶೇಖರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಸಚಿವ ಮೌಖಿಕ ಆದೇಶದಂತೆ ಅವ್ಯವಹಾರ ನಡೆದಿದೆ ಎಂದು ನಮೂದಾಗಿದೆ ಎಂದು ದೂರಿದರು.

ನಿಗಮದಲ್ಲಿ ಅವ್ಯವಹಾರ ನಡೆದ ಬಗ್ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಒಪ್ಪಿಕೊಂಡು ರಾಜೀನಾಮೆ ನೀಡಿದ್ದಾರೆ. ಅಷ್ಟಕ್ಕೂ ನಿಗಮದ ಹಗರಣದ ರೂವಾರಿಗಳು ಯಾರು. ಅಧಿಕಾರಿಯ ಆತ್ಮಹತ್ಯೆಯ ಹೊಣೆ ಹೊರುವವರು ಯಾರು. ಅನ್ಯಾಯಕ್ಕೊಳಗಾಗಿರುವ ಎಸ್ ಟಿ ಸಮುದಾಯಕ್ಕೆ ನ್ಯಾಯ ಒದಗಿಸುವವರು ಎಂದು ಪ್ರತಿಭಟನಾ ಕಾರರು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದ ಹಣವನ್ನು ಮುಖ್ಯಮಂತ್ರಿ ಆದಿಯಾಗಿ ಸಚಿವರು, ಶಾಸಕರು ಹಾಗೂ ನಿಗಮದ ಅಧ್ಯಕ್ಷರು ಸೇರಿಕೊಂಡು 187 ಕೋಟಿ ರು.ಗಳನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ. ಈ ಭ್ರಷ್ಟ ಸರ್ಕಾರ ನಿಷ್ಠಾವಂತ ಅಧಿಕಾರಿಯ ಸಾವಿಗೆ ಕಾರಣ‍ವಾಗಿದೆ. ಆದ್ದರಿಂದ ಇದರ ನೇರ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಸರ್ಕಾರವನ್ನು ವಿಸರ್ಜಿಸಬೇಕು.

ಈ ಹಗರಣ ಕುರಿತು ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಿಗಮದ ಹಣವನ್ನು ದಂಡ ಸಹಿತ ವಸೂಲಿ ಮಾಡಿ ಎಸ್ ಟಿ ಸಮುದಾಯಕ್ಕೆ ಹಾಗೂ ನಿಗಮದ ಅಧೀಕ್ಷಕ ಚಂದ್ರಶೇಖರ್ ಸಾವಿಗೆ ನ್ಯಾಯ ಒದಗಿಸಿಕೊಡಬೇಕು. ಅವರ ಕುಟುಂಬಕ್ಕೆ ಸರ್ಕಾರ ನೆರವಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.

ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದ ಪ್ರತಿಭಟನಾಕಾರರನ್ನು ಮಧ್ಯಾಹ್ನವೇ ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ದರ್ಶನ್ ರೆಡ್ಡಿ, ಮುಖಂಡರಾದ ಎಸ್.ಆರ್.ನಾಗರಾಜು, ರಾಜು, ಶಿವಾನಂದ, ಚೇತನ್ , ಚಂದ್ರಶೇಖರ್, ಮಂಜು, ಚನ್ನಪ್ಪ, ರೈತ ಮೋರ್ಚಾ ಮುಖಂಡ ಪ್ರಕಾಶ್ ,

ಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ, ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ವಾಸು ನಾಯಕ್, ಜಯಕುಮಾರ್, ಗೋವಿಂದರಾಜು ಮತ್ತಿತರರು ಭಾಗವಹಿಸಿದ್ದರು.

28ಕೆಆರ್ ಎಂಎನ್ 1,2,3.ಜೆಪಿಜಿ

1.ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಧರಣಿ ನಡೆಸಿದರು.

2.ಪೊಲೀಸರು ಪ್ರತಿಭಟನಾನಿರತ ಬಿಜೆಪಿ ಮುಖಂಡರನ್ನು ಪೊಲೀಸ್ ವಾಹನಕ್ಕೆ ತುಂಬುತ್ತಿರುವುದು

3.ಪೊಲೀಸ್ ವಾಹನ ಅಡ್ಡಗಟ್ಟಿ ಎದುರು ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದರು.