ಬಿಜೆಪಿ ಕಾರ್ಯಕರ್ತರ ಬಂಧನ ಖಂಡನೀಯ

| Published : Jan 03 2024, 01:45 AM IST

ಸಾರಾಂಶ

ಸಿದ್ದರಾಮಯ್ಯನವರ ಅವರ ಕುರ್ಚಿ ಸಂಚಕಾರ ಬಂದಾಗೆಲ್ಲ ಜನರ ಭಾವನೆಯೊಂದಿಗೆ ಆಟವಾಡುತ್ತಾರೆ

ಕನ್ನಡಪ್ರಭ ವಾರ್ತೆ ಮುಧೋಳ

ಸಿದ್ದರಾಮಯ್ಯನವರ ಅವರ ಕುರ್ಚಿ ಸಂಚಕಾರ ಬಂದಾಗೆಲ್ಲ ಜನರ ಭಾವನೆಯೊಂದಿಗೆ ಆಟವಾಡುತ್ತಾರೆ. ಅಯೋಧ್ಯ ಹೋರಾಟದ 32 ವರ್ಷದ ಹಿಂದಿನ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರ ಬಂಧನ ಖಂಡನೀಯ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗಿಂತ ಈಗ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುವುದನ್ನು ಮನಗಂಡಿರುವ ಕಾಂಗ್ರೆಸ್ ನಾಯಕರಿಗೆ ಆತಂಕ ಶುರುವಾಗಿದೆ. ಇಂಡಿಯಾ ಒಕ್ಕೂಟ ಚುನಾವಣೆ ಮುನ್ನವೇ ಛಿತ್ರಗೊಳ್ಳಲಿದೆ. ಕಾಂಗ್ರೆಸ್ ಪಕ್ಷ ಆರಂಭದಿಂದಲೂ ದಲಿತ ವಿರೋಧಿ ನೀತಿ ಅನುಸರಿಸುತ್ತಾ ಬಂದಿದೆ. ಮಮತಾ ಬ್ಯಾನರ್ಜಿ, ಕ್ರೇಜಿವಾಲ್‌ ಅವರು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗಲಿ ಎಂದು ಹೇಳಿದರೆ ಸಿದ್ದರಾಮಯ್ಯನವರು ಮಾತ್ರ ರಾಹುಲ್‌ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳಿದರು.

ಡಾ.ಅಂಬೇಡ್ಕರ್, ಜಗಜೀನರಾಂ ಅವರಿಗೆ ಕಾಂಗ್ರೆಸ್‌ ಅವಮಾನ ಮಾಡಿದಂತೆ ಪರಮೇಶ್ವರ ಹಾಗೂ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗದಂತೆ ಕಾಂಗ್ರೆಸ್ ದಲಿತ ವಿರೋಧಿ ನಿಲುವು ಹೊಂದಿತ್ತು ಎಂದು ಆರೋಪಿಸಿದರು.

7 ತಿಂಗಳಾದರೂ ಅನುದಾನ ತಂದಿಲ್ಲ:

ಮುಧೋಳದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಗತಿಸಿದರೂ ಒಂದೇ ಒಂದು ರುಪಾಯಿ ಅನುದಾನ, ಕಾಮಗಾರಿ, ಯೋಜನೆಗಳನ್ನು ತಂದಿಲ್ಲ. ಹಿಂದಿನ ಸರ್ಕಾರದ ಕಾಮಗಾರಿಗಳನ್ನು ಮತ್ತೊಮ್ಮೆ ಶಂಕುಸ್ಥಾಪನೆ, ಉದ್ಘಾಟನೆ ಮಾಡುತ್ತಿದ್ದಾರೆ. ಪ್ರಭಾವಿ ಮಂತ್ರಿಗಳಾಗಿರುವ ಅವರು ಸಾವಿರ ಕೋಟಿ ರುಪಾಯಿ ಅನುದಾನವನ್ನು ಮುಧೋಳ ಕ್ಷೇತ್ರಕ್ಕೆ ತಂದು ಹೊಸ ಯೋಜನೆಗಳನ್ನು ಆರಂಭಿಸಲಿ ಎಂದು ಹೇಳಿದರು. ಮೂರು ಬಾರಿ ಶಾಸಕರಾಗಿ, ನಾಲ್ಕು ಬಾರಿ ಸಚಿವರಾಗಿ, ಒಂದು ಸಲ ವಿಧಾನ ಪರಿಷತ್ ಸದಸ್ಯರಾಗಿ ಮುಧೋಳ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆಂದು ಹೇಳಲಿ ಎಂದು ಅವರು ಸವಾಲು ಹಾಕಿದರು.

ಕೇಂದ್ರದ ಮೇಲೆ ಆರೋಪ ಸರಿಯಲ್ಲ:

ಬರ ನಿರ್ವಹಣೆಗೆ ಪ್ರತಿ ಕ್ಷೇತ್ರಕ್ಕೆ₹25 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಮೇವು ಬ್ಯಾಂಕ್, ಗೋಶಾಲೆ ಆರಂಭಿಸಿ ರೈತರ ನೆರವಿಗೆ ಧಾವಿಸಬೇಕು. ಜನರು ಗುಳೆ ಹೊಗುವುದನ್ನು ತಪ್ಪಿಸಲು ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಬರ ನಿರ್ವಹಣೆಗೆ ಕೇಂದ್ರ ತಂಡ ಬಂದಾಗ ನೀರು ಇರುವ ಒಳ್ಳೆ ಫಸಲು ಇರುವ ಪ್ರದೇಶವನ್ನು ತೋರಿಸಿ ಬೇಜವಾಬ್ದಾರಿ ತೋರಿದ್ದಾರೆ. ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್‌ ಅನ್ವಯ ಅಗತ್ಯ ದಾಖಲಾತಿ ನೀಡದೇ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಗೂಬೆ ಕೂಡಿಸುವುದು ಸರಿಯಲ್ಲ ಎಂದರು.

ಸಾಲಮನ್ನಾ ಮಾಡಲಿ:

ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳುವ ಮುಖ್ಯಮಂತ್ರಿಗಳು ಬರವನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ರಾಜ್ಯದ 1,72,9000 ರೈತರಿಗೆ ಬಡ್ಡಿ ರಹಿತವಾಗಿ ₹13,408 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಕನಿಷ್ಠ ಅರ್ಧದಷ್ಟು ಸಾಲಮನ್ನಾ ಮಾಡಿ ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಬಿಜೆಪಿ ಮುಖಂಡರಾದ ಕೆ.ಆರ್.ಮಾಚಪ್ಪನವರ, ಕಲ್ಲಪ್ಪಣ್ಣ ಸಬರದ, ಹನಮಂತ ತುಳಸಿಗೇರಿ, ಡಾ.ರವಿ ನಂದಗಾಂವ, ಕುಮಾರ ಹುಲಕುಂದ, ನಾಗಪ್ಪ ಅಂಬಿ, ಬಸವರಾಜ ಮಳಲಿ, ಸೋನಾಪ್ಪಿ ಕುಲಕರ್ಣಿ, ಡಾ.ಸುಮೇದಾ ಮಾನೆ, ಸದಪ್ಪ ತೇಲಿ, ಸಂತೋಷ ಘೋರ್ಪಡೆ, ಮಾರುತಿ ಆನಿ, ಬಂಡು ಘಾಟಗೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

--

ಬಾಕ್ಸ್‌

20 ದಿನ ನೀರು ಹರಿಸಿ:

ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಕೇವಲ 10 ದಿನಗಳವರೆಗೆ ನೀರು ಹರಿಸಿದರೆ ಅದು ಕೇವಲ ಬೆಳಗಾವಿ ಜಿಲ್ಲೆಯವರಿಗೆ ಮಾತ್ರ ಪ್ರಯೋಜನವಾಗಲಿದೆ. ಇದರಿಂದ ಬಾಗಲಕೋಟೆ ಜಿಲ್ಲೆಯ ಜನರು ನೀರಿನಿಂದ ವಂಚಿತರಾಗುವುದು ಖಚಿತ. ಅದಕ್ಕಾಗಿ ಬಾಗಲಕೋಟೆ ಜಿಲ್ಲೆಯ ಕೊನೆಯ ಗ್ರಾಮದ ರೈತರಿಗೂ ನೀರು ತಲುಪಿಸಲು ಇನ್ನೂ 20 ದಿನದವರೆಗೆ ನೀರನ್ನು ಹರಿಸಬೇಕೆಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆಗ್ರಹಿಸಿದರು.

---

ಕೋಟ್‌

ಬರಗಾಲದಿಂದ ರೈತಾಪಿ ವರ್ಗ ತೀವ್ರ ಸಂಕಷ್ಟದಲ್ಲಿದೆ. ಉಳಿದಿರುವ ಬೆಳೆ ಸಂರಕ್ಷಣೆಗೆ ಕುಡಿಯುವ ನೀರಿಗಾಗಿ 20 ದಿನ ಹರಿಸುವುದು 30 ವರ್ಷಗಳಿಂದ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಭೆಯಲ್ಲಿ ಜವಾಬ್ದಾರಿಯಿಂದ ನಡೆದುಕೊಂಡು 20 ದಿನಗಳವೆರೆಗೆ ನೀರನ್ನು ಬಿಡಿಸಬೇಕಿತ್ತು ಎಂದರು.

--

ಈಗ ಬಿಟ್ಟಿರುವ ನೀರು ಕೇವಲ ಬೆಳಗಾವಿ ಜಿಲ್ಲೆಯ ರೈತರಿಗೆ ಮಾತ್ರ ದೊರಕಲಿದೆ. ಈಗಲೂ ಕಾಲ ಮಿಂಚಿಲ್ಲ 20 ದಿನಗಳವರೆಗೆ ನೀರು ಹರಿಸುವ ಮೂಲಕ ಬಾಗಲಕೋಟೆ ಜಿಲ್ಲೆಯ ರೈತರಿಗೆ ನೆರವಾಗಬೇಕು.

-ಗೋವಿಂದ ಕಾರಜೋಳ, ಮಾಜಿ ಡಿಸಿಎಂ