ಸಾರಾಂಶ
ಭಟ್ಕಳ: ನಮ್ಮ ರಾಜ್ಯದ ಮೀನುಗಾರರ ಮೇಲೆ ದಬ್ಬಾಳಿಕೆ ನಡೆಯುತ್ತಿರುವ ಹಿನ್ನೆಲೆ ಇನ್ನು ಮುಂದೆ ಗೋವಾ, ಮಹಾರಾಷ್ಟ್ರದ ಮೀನುಗಾರರು, ಮೀನುಗಾರಿಕೆಗೆ ರಾಜ್ಯದ ಗಡಿ ಪ್ರವೇಶಿಸಿದಲ್ಲಿ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಂದರು ಹಾಗೂ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಇಲ್ಲಿನ ಅಳ್ವೆಕೋಡಿಯಲ್ಲಿ ಮಾರಿಜಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ಗೋವಾ, ಮಹಾರಾಷ್ಟ್ರದಲ್ಲಿ ಕರ್ನಾಟಕದ ಮೀನುಗಾರರ ಮೇಲೆ ಹಲ್ಲೆ ನಡೆಯುತ್ತಿವೆ. ಅಲ್ಲಿನ ಅಧಿಕಾರಿಗಳು ಕೂಡಾ ರಾಜ್ಯದ ಮೀನುಗಾರರನ್ನು ಬಂಧಿಸಿ ಲಕ್ಷಾಂತರ ರು. ಸುಲಿಗೆ ಮಾಡುತ್ತಿದ್ದಾರೆ. 4 ದಿನಗಳ ಹಿಂದೆಯೂ ಮಲ್ಫೆಯ ಒಂದು ಬೋಟನ್ನು ವಶಪಡಿಸಿಕೊಂಡು ಹಲ್ಲೆ ನಡೆಸಲಾಗಿದೆ. ಅಲ್ಲದೇ, ಸುಳ್ಳು ಆರೋಪ ಮಾಡಿ ರಾಜ್ಯದ ಮೀನುಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ದೇಶ ಹಾಗೂ ರಾಜ್ಯದ ಕಾನೂನಿಗೆ ಗೌರವ ಕೊಟ್ಟು ರಾಜ್ಯದ ಮೀನುಗಾರರು ಮೀನುಗಾರಿಕೆ ನಡೆಸುತ್ತಾರೆ. ದೇಶದ ಸಮುದ್ರ ಗಡಿ ವ್ಯಾಪ್ತಿಯಲ್ಲಿ ಮೀನುಗಾರರು ಎಲ್ಲಿ ಕೂಡಾ ಮೀನುಗಾರಿಕೆ ನಡೆಸಲು ಅವಕಾಶವಿದೆ. ಇನ್ನು ಮುಂದೆ ರಾಜ್ಯದ ಮೀನುಗಾರರ ಮೇಲೆ ಹಲ್ಲೆ, ಪ್ರಕರಣ ದಾಖಲಾದರೆ, ಗೋವಾ, ಮಹಾರಾಷ್ಟ್ರದ ಮೀನುಗಾರರು ರಾಜ್ಯದ ಗಡಿ ಪ್ರವೇಶಿಸಲು ಬಿಡುವುದಿಲ್ಲ. ನಮ್ಮ ಮೀನುಗಾರರ ಜತೆ ಅಲ್ಲಿ ಮೀನುಗಾರಿಕೆ ಇಲಾಖೆ ಯಾವ ರೀತಿ ನಡೆದುಕೊಳ್ಳುತ್ತದೋ ನಮ್ಮಲ್ಲೂ ಅದೇ ರೀತಿ ನಡೆಯುತ್ತದೆ. ಸೌಹಾರ್ದತೆಯಿಂದ ಎಲ್ಲರೂ ಮೀನುಗಾರಿಕೆಗೆ ಅವಕಾಶ ನೀಡಿದರೆ ಒಳ್ಳೆಯದು. ಇಲ್ಲವಾದಲ್ಲಿ ಗೋವಾ, ಮಹಾರಾಷ್ಟ್ರದವರ ಬೋಟ್ ಬಂದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಜಾತ್ರೆ ವೇಳೆ ಕಾರು ಡಿಕ್ಕಿಯಾಗಿ ಯುವತಿ ಸಾವು, 8 ಜನರಿಗೆ ಗಾಯಸಿದ್ದಾಪುರ: ಪಟ್ಟಣದ ಬಾಲಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ವೇಳೆ ಮಂಗಳವಾರ ಸಂಜೆ ಕಾರೊಂದು ಡಿಕ್ಕಿಯಾಗಿ ಓರ್ವ ಯುವತಿ ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ತಾಲೂಕಿನ ಕಸ್ತೂರು ಕಲಕೊಪ್ಪದ ದೀಪಾ ರಾಮಾ ಗೊಂಡ(೨೧) ಎಂವಬರೇ ಮೃತಪಟ್ಟವರು. ಗಜಾನನ ಹೆಗಡೆ ಮದ್ದಿನಕೇರಿ(೬೯), ಕಲ್ಪಿತಾ ರಘುಪತಿ ನಾಯ್ಕ(೫) ಕಳೂರು, ಚೈತ್ರ ರಘುಪತಿ ನಾಯ್ಕ ಕಳೂರು(೩೭), ಜಾನಕಿ ಗೋವಿಂದ ನಾಯ್ಕ ಅವರಗುಪ್ಪ(೨೪), ಜ್ಯೋತಿ ಮಂಜುನಾಥ ನಾಯ್ಕ ಕಲಕೊಪ್ಪ(೨೪), ಮಾದೇವಿ ಹುಚ್ಚ ನಾಯ್ಕ ಹೊಸೂರು(೬೯), ರಾಮಪ್ಪ ನಾಯ್ಕ ಬೆನ್ನೂರು(೪೦), ಗೌರಿ ಉದಯ ಮಡಿವಾಳ ಜಾತಿಕಟ್ಟಾ(೩೬) ಎನ್ನುವವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ರೋಶನ್ ಫರ್ನಾಂಡಿಸ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಘಟನೆಯ ವಿವರ: ಸಿದ್ದಾಪುರ- ಚಂದ್ರಗುತ್ತಿ ರಾಜ್ಯ ರಸ್ತೆಯ ಬಾಲಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದ ನಿಮಿತ್ತ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆ ರಸ್ತೆಯಲ್ಲಿ ವಾಹನ ಓಡಾಟಕ್ಕೆ ನಿರ್ಬಂಧವಿದ್ದರೂ ಕಾರು ಚಾಲಕ ತಡೆಗೋಡೆ ಹಾಗೂ ದ್ವಾರಗಳನ್ನು ಉಜ್ಜಿಕೊಂಡು ಹೋಗಿ ಅಪಘಾತ ನಡೆಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ತಕ್ಷಣದ ಚಿಕಿತ್ಸೆ ನೀಡಲಾಗಿದೆ.