ಸಾರಾಂಶ
ಭಾಲ್ಕಿ-ಹುಮನಾಬಾದ ರಸ್ತೆಯ ಕುರುಬಖೇಳಗಿ ಗ್ರಾಮ ವ್ಯಾಪ್ತಿಯ ಧರಿ ಸಿದ್ದೇಶ್ವರ ಮಂದಿರ ಬಳಿ ಲೂಟಿ ಮಾಡುವ ಉದ್ದೇಶದಿಂದ ಸಿದ್ಧತೆ ಮಾಡಿಕೊಂಡು ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದ 5 ಜನರ ಪೈಕಿ 4 ಜನ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.
ಬೀದರ್: ಭಾಲ್ಕಿ-ಹುಮನಾಬಾದ ರಸ್ತೆಯ ಕುರುಬಖೇಳಗಿ ಗ್ರಾಮ ವ್ಯಾಪ್ತಿಯ ಧರಿ ಸಿದ್ದೇಶ್ವರ ಮಂದಿರ ಬಳಿ ಲೂಟಿ ಮಾಡುವ ಉದ್ದೇಶದಿಂದ ಸಿದ್ಧತೆ ಮಾಡಿಕೊಂಡು ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದ 5 ಜನರ ಪೈಕಿ 4 ಜನ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.
ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಿ ವಾಹನಗಳಲ್ಲಿನ ಜನರಿಗೆ ಹೆದರಿಸಿ ಅವರಿಂದ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುವ ಏಕೋದ್ದೇಶದಿಂದ ರಸ್ತೆ ಪಕ್ಕದಲ್ಲಿ ವಾಹನಗಳಿಗಾಗಿ ಕಾಯುತ್ತ ನಿಂತಿರುವಾಗ ಭಾಲ್ಕಿ ಗ್ರಾಮೀಣ ಸಿಪಿಐ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಹಣಮಂತ ಹಾಗೂ ಸಿಬ್ಬಂದಿ ಏಕಕಾಲಕ್ಕೆ ಆರೋಪಿತರ ಮೇಲೆ ದಾಳಿ ಮಾಡಿ ಅವರಿಂದ ಮಾರಕಾಸ್ತ್ರಗಳು ಮತ್ತು 100 ಗ್ರಾಂ ಖಾರದ ಪುಡಿಯನ್ನು ಜಪ್ತಿ ಮಾಡಿಕೊಂಡು ಸದರಿ ತಪ್ಪಿತಸ್ಥರ ವಿರುದ್ಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸದರಿ 5 ಜನ ಆರೋಪಿತರ ಪೈಕಿ 4 ಜನರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಲಪಡಿಸಿದ್ದು ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬಂಧಿತ 4 ಜನ ಆರೋಪಿತರ ಪೈಕಿ ಇಬ್ಬರ ಮೇಲೆ ಈಗಾಗಲೇ ಮಾರಣಾಂತಿಕ ಹಲ್ಲೆ, ಸುಲಿಗೆ, ಮನೆ ಕಳ್ಳತನ ಪ್ರಕರಣಗಳಿವೆ. ತಲೆ ಮರೆಸಿಕೊಂಡಿರುವ ಆರೋಪಿ ಮೇಲೆ ಈಗಾಗಲೇ ಗುಂಡಾ ಕಾಯ್ದೆ ಅಡಿಯಲ್ಲಿ ಕಳೆದ ವರ್ಷ ಕ್ರಮ ಕೈಗೊಳ್ಳಲಾಗಿತ್ತು.
ಡಕಾಯಿತಿಗೆ ಸಂಚು ರೂಪಿಸುತ್ತಿರುವವರನ್ನು ವಿಫಲಗೊಳಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡದ ಕೆಲಸಕ್ಕೆ ಎಸ್ಪಿ ಅವರು ಪ್ರಶಂಸಿಸಿ ನಗದು ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.