ಸಾರಾಂಶ
ರಾಣಿಬೆನ್ನೂರು: ತಾಲೂಕಿನ ತಾಂಡಾದ ಮಹಿಳೆಯರಿಗೆ ಅನಧಿಕೃತವಾಗಿ ಗರ್ಭಕೋಶದ ಶಸ್ತ್ರ ಚಿಕಿತ್ಸೆ ಮಾಡಿರುವ ವೈದ್ಯ ಡಾ. ಶಾಂತ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ವಾಹನ ತಡೆದು ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದ ಕೆಲ ಪ್ರತಿಭಟನಕಾರರನ್ನು ಹಾಗೂ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದ ಕ್ರಮವನ್ನು ಖಂಡಿಸಿ ಸಂತ್ರಸ್ತ ಮಹಿಳೆಯರು ಶುಕ್ರವಾರ ಗ್ರಾಮೀಣ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಗುಡ್ಡಕ್ಕೆ ಬರುತ್ತಿದ್ದಾಗ ಮಾರ್ಗಮಧ್ಯೆ ಅವರ ವಾಹನ ತಡೆದು ಮನವಿ ಸಲ್ಲಿಸಲು ಪ್ರತಿಭಟನಕಾರರು ನಿರ್ಧರಿಸಿದ್ದರು. ಇದನ್ನು ಅರಿತ ಪೊಲೀಸರು ಕೆಲ ಪ್ರತಿಭಟನಕಾರರನ್ನು ವಶಕ್ಕೆ ಪಡೆದು ರಾಣಿಬೆನ್ನೂರು ಶಹರ ಠಾಣೆಯಲ್ಲಿ ಇರಿಸಿದ್ದರು. ಇದಲ್ಲದೆ ದೇವರಗುಡ್ಡದಲ್ಲಿ ಸಮಾರಂಭದ ವೇದಿಕೆ ಬಳಿಯೂ ಸಂತ್ರಸ್ತ ಮಹಿಳೆಯರಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಅವಕಾಶ ನಿರಾಕರಿಸಲಾಯಿತು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ರೈತ ಮುಖಂಡ ಹನುಮಂತಪ್ಪ ಕಬ್ಬಾರ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡರು. ಆದರೆ ಇದಕ್ಕೂ ಪೊಲೀಸ್ ಅಧಿಕಾರಿಗಳು ಕ್ಯಾರೆ ಎನ್ನದ ಕಾರಣ ಪ್ರತಿಭಟನೆ ಹಿಂದಕ್ಕೆ ಪಡೆದ ಪ್ರತಿಭಟನಾಕಾರರು ಸೆ. 2ರಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ನಿರಂತರ ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಿದರು. ಜಗದೀಶ ಕೆರೂಡಿ, ಲಲಿತಾ ಲಮಾಣಿ, ಲಕ್ಷ್ಮವ್ವ ಲಮಾಣಿ, ಗಂಗವ್ವ ಲಮಾಣಿ, ಮಂಜವ್ವ ಚೌಡಣ್ಣನವರ, ಮಂಜಪ್ಪ ಮರಾಠಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.