ಸಿಎಂಗೆ ಕಪ್ಪುಬಾವುಟ ಪ್ರದರ್ಶನಕ್ಕೆ ಸಜ್ಜಾಗಿ ನಿಂತಿದ್ದ ಜೆಡಿಎಸ್‌- ಬಿಜೆಪಿ ಕಾರ್ಯಕರ್ತರ ಬಂಧನ

| Published : Sep 15 2024, 01:48 AM IST

ಸಿಎಂಗೆ ಕಪ್ಪುಬಾವುಟ ಪ್ರದರ್ಶನಕ್ಕೆ ಸಜ್ಜಾಗಿ ನಿಂತಿದ್ದ ಜೆಡಿಎಸ್‌- ಬಿಜೆಪಿ ಕಾರ್ಯಕರ್ತರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ನೀರಿಲ್ಲದೇ ಮಳವಳ್ಳಿ ಜನರು ಕಂಗೆಟ್ಟಿದ್ದಾರೆ. ಬೆಳೆ ಬೆಳೆಯದೇ ಜೀವನ ನಡೆಸಲು ದುಸ್ಥರ ಸ್ಥಿತಿ ನಿರ್ಮಾಣವಾಗಿ ಕಂಗಾಲಾಗಿರುವ ರೈತನಿಗೆ ಸಾಂತ್ವನ ಹೇಳಿ ನೀರು ಬಿಡುವುದನ್ನು ಬಿಟ್ಟು ಹಾಲಿ ಶಾಸಕರು ಗಗನಚುಕ್ಕಿ ಜಲಪಾತೋತ್ಸವದ ಮೂಲಕ ಮೋಜು, ಮಸ್ತಿಗೆ ಮುಂದಾಗಿದ್ದಾರೆ. ನೀರಿಲ್ಲದ ಜನಕ್ಕೆ ಈ ಮನರಂಜನೆ ಬೇಕಿತ್ತೇ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಳವಳ್ಳಿಯ ಕಡೆ ಭಾಗಕ್ಕೆ ನೀರು ಬಿಡದೇ ಗಗನಚುಕ್ಕಿ ಜಲಪಾತೋತ್ಸವ ಆಚರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಜಲಪಾತೋತ್ಸವ ಉದ್ಘಾಟನೆಗೆ ಆಗಮಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಲು ಸಜ್ಜಾಗಿದ್ದ ನೂರಾರು ಮಂದಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಪಟ್ಟಣದ ಅನಂತರಾಮ್ ವೃತ್ತದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಜಮಾಯಿಸಿ, ಕಳೆದ ಎರಡು ವರ್ಷಗಳಿಂದ ಮಳವಳ್ಳಿಯ ಕಡೆ ಭಾಗ ಕಾವೇರಿ ನೀರನ್ನು ನೋಡಿಯೇ ಇಲ್ಲ. ತಾಲೂಕು ಬರದಿಂದ ತಾಂಡವವಾಡುತ್ತಿದ್ದು, ಈ ಬಗ್ಗೆ ಗಮನ ಹರಿಸದೇ ಗಗನಚುಕ್ಕಿ ಜಲಪಾತೋತ್ಸವ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವನಸಮುದ್ರಕ್ಕೆ ಹೋಗುವ ಮಾರ್ಗದಲ್ಲಿ ಕಪ್ಪುಬಾವುಟ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದ ಕಾರ್ಯಕರ್ತರನ್ನು ಬಂಧಿಸಲಾಯಿತು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ನೀರಿಲ್ಲದೇ ಮಳವಳ್ಳಿ ಜನರು ಕಂಗೆಟ್ಟಿದ್ದಾರೆ. ಬೆಳೆ ಬೆಳೆಯದೇ ಜೀವನ ನಡೆಸಲು ದುಸ್ಥರ ಸ್ಥಿತಿ ನಿರ್ಮಾಣವಾಗಿ ಕಂಗಾಲಾಗಿರುವ ರೈತನಿಗೆ ಸಾಂತ್ವನ ಹೇಳಿ ನೀರು ಬಿಡುವುದನ್ನು ಬಿಟ್ಟು ಹಾಲಿ ಶಾಸಕರು ಗಗನಚುಕ್ಕಿ ಜಲಪಾತೋತ್ಸವದ ಮೂಲಕ ಮೋಜು, ಮಸ್ತಿಗೆ ಮುಂದಾಗಿದ್ದಾರೆ. ನೀರಿಲ್ಲದ ಜನಕ್ಕೆ ಈ ಮನರಂಜನೆ ಬೇಕಿತ್ತೇ ಎಂದು ಪ್ರಶ್ನಿಸಿದರು.

ಕಳೆದ ಮೂರು ತಿಂಗಳಿಂದ ಕೆಆರ್‌ಎಸ್ ಡ್ಯಾಂನಿಂದ ನಾಲೆಗಳಿಗೆ ನೀರು ಬಿಡಲಾಗುತ್ತಿದೆ. ಆದರೆ ತಮಿಳುನಾಡಿಗೆ ಮತ್ತು ಕುಡಿಯುವ ಸಲುವಾಗಿ ಬೆಂಗಳೂರಿಗೆ ನೀರು ಸರಬರಾಜಾಗುವುದು ಮಳವಳ್ಳಿ ತಾಲೂಕಿನ ಮೂಲಕವೇ. ಆದರೆ ಈ ತಾಲೂಕಿಗೇ ನೀರಿಲ್ಲ. ಬೆಳೆ ಬೆಳೆಯಲು ನೀರಿಲ್ಲದೇ ರೈತ ಕಂಗಾಲಾಗಿದ್ದು, ಮಳವಳ್ಳಿಯ ಬಹುತೇಕ ಕೆರೆ ಕಟ್ಟೆಗಳು ಖಾಲಿಯಾಗಿವೆ. ಅಧಿಕಾರಿಗಳಿಗೆ ತಾಕೀತು ಮಾಡಿ, ನಾಲೆ, ಕೆರೆಗಳ ಹೂಳು ತೆಗೆಸುವುದನ್ನು ಬಿಟ್ಟು ಜಲಪಾತೋತ್ಸವ ಅವಶ್ಯಕತೆ ಇದೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳವಳ್ಳಿ ತಾಲೂಕಿನ ದೊರನಹಳ್ಳಿ, ಮಾರಹಳ್ಳಿ, ಕಿರುಗಾವಲು, ಮಿಕ್ಕೆರೆ, ಹಲಗೂರು, ತಳಗವಾದಿ ಸೇರಿ ಹಲವು ಗ್ರಾಮಗಳಲ್ಲಿ ನೀರಿಲ್ಲದೇ ಜನ ಕಂಗೆಟ್ಟಿದ್ದಾರೆ. ಕೆಲವು ಕಡೆಯಂತೂ ಜನ ಜೆಡಿಎಸ್‌ಗೆ ಮತ ಕೊಡುತ್ತಾರೆಂದು ಉದ್ದೇಶಪೂರ್ವಕವಾಗಿ ನೀರು ಬಿಡುತ್ತಿಲ್ಲ. ಈ ಜನರ ಸಮಸ್ಯೆ ಕೇಳುವವರು ಯಾರು? ಕೇಂದ್ರ ಸಚಿವ ಕುಮಾರಸ್ವಾಮಿ ಸಹ ಈ ಬಗ್ಗೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದು, ನೀರು ಬಿಡುವಂತೆ ಸೂಚಿಸಿದ್ದಾರೆ. ಅದ್ಯಾವಾಗ ನೀರು ಬಿಡುತ್ತಾರೋ ಕಾದು ನೋಡೋಣ ಎಂದರು.

ವಶಕ್ಕೆ ಪಡೆದ ಎಲ್ಲಾ ಕಾರ್ಯಕರ್ತರನ್ನು ಖಾಸಗಿ ಸಮುದಾಯಕ್ಕೆ ಕರೆದೊಯ್ದು ಕಾರ್ಯಕ್ರಮ ಮುಗಿದ ಬಳಿಕ ಎಲ್ಲರನ್ನು ಬಿಡುಗಡೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಜೆಡಿಎಸ್ ಯುವಘಟಕದ ಅಧ್ಯಕ್ಷ ಕಂಸಾಗರ ರವಿ, ಮುಖಂಡರಾದ ಮುನಿರಾಜು, ಚಂದಹಳ್ಳಿ ಶ್ರೀಧರ್, ನಂದಕುಮಾರ್, ಮಹೇಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.