ಬಾಕಿ ಬಿಲ್‌ ಪಾವತಿಸದ ಸಣ್ಣ ನೀರಾವರಿ ಇಲಾಖೆ ಕಚೇರಿ ಅಧಿಕಾರಿ ಬಂಧನ

| Published : Jan 09 2025, 12:45 AM IST

ಬಾಕಿ ಬಿಲ್‌ ಪಾವತಿಸದ ಸಣ್ಣ ನೀರಾವರಿ ಇಲಾಖೆ ಕಚೇರಿ ಅಧಿಕಾರಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

30 ವರ್ಷಗಳ ಹಿಂದೆ ಹುಬ್ಬಳ್ಳಿ ಮೂಲದ ಆರ್.ಎನ್. ನಾಯಕ ಎಂಬ ಸಿವಿಲ್ ಗುತ್ತಿಗೆದಾರರು ಅಖಂಡ ಧಾರವಾಡ ಜಿಲ್ಲಾ ವ್ಯಾಪ್ತಿಯ ಗದಗನಲ್ಲಿ ಸಿವಿಲ್ ಕಾಮಗಾರಿ ನಿರ್ವಹಿಸಿದ್ದರು. ಆಗ ಅದರ ಬಿಲ್ ₹ 18 ಲಕ್ಷ ಆಗಿತ್ತು. ಬಾಕಿ ಬಿಲ್‌ ನೀಡದೇ ಕಚೇರಿ ಅಧಿಕಾರಿಗಳು ಸತಾಯಿಸುತ್ತಲೇ ಬಂದಿದ್ದರು. ಇದನ್ನು ಪ್ರಶ್ನಿಸಿ ಗುತ್ತಿಗೆದಾರ ನಾಯಕ ನ್ಯಾಯಾಲಯದ ಮೊರೆ ಹೋಗಿದ್ದರು.

ಧಾರವಾಡ:

ಸರ್ಕಾರದಲ್ಲಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ವಿಳಂಬ ಮಾಡಿದ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರನ್ನೇ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿಯ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ದೇವರಾಜ ಶಿಗ್ಗಾಂವಿ ಅವರನ್ನು ಗುತ್ತಿಗೆದಾರರ ದೂರಿನ ಅನ್ವಯ, ನ್ಯಾಯಾಲಯದ ಆದೇಶದಂತೆ ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಆಗಿದ್ದೇನು?

30 ವರ್ಷಗಳ ಹಿಂದೆ ಹುಬ್ಬಳ್ಳಿ ಮೂಲದ ಆರ್.ಎನ್. ನಾಯಕ ಎಂಬ ಸಿವಿಲ್ ಗುತ್ತಿಗೆದಾರರು ಅಖಂಡ ಧಾರವಾಡ ಜಿಲ್ಲಾ ವ್ಯಾಪ್ತಿಯ ಗದಗನಲ್ಲಿ ಸಿವಿಲ್ ಕಾಮಗಾರಿ ನಿರ್ವಹಿಸಿದ್ದರು. ಆಗ ಅದರ ಬಿಲ್ ₹ 18 ಲಕ್ಷ ಆಗಿತ್ತು. ಬಾಕಿ ಬಿಲ್‌ ನೀಡದೇ ಕಚೇರಿ ಅಧಿಕಾರಿಗಳು ಸತಾಯಿಸುತ್ತಲೇ ಬಂದಿದ್ದರು. ಇದನ್ನು ಪ್ರಶ್ನಿಸಿ ಗುತ್ತಿಗೆದಾರ ನಾಯಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಕೋರ್ಟ್ ಅಂದಿನಿಂದ ಇಂದಿನ ವರೆಗೆ ಬಡ್ಡಿ ಸೇರಿಸಿ ನಾಯಕ ಅವರಿಗೆ ಇಲಾಖೆಯು ₹ 3.34 ಕೋಟಿ ನೀಡುವಂತೆ ಆದೇಶಿಸಿತ್ತು. ಆದೇಶ ನೀಡಿ ಹಲವು ದಿನಗಳಾದರೂ ಗುತ್ತಿಗೆದಾರರಿಗೆ ಹಣ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯದ ಆದೇಶದಂತೆ ಸಂಬಂಧಿಸಿದ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಗುತ್ತಿಗೆದಾರರ ಪರ ನ್ಯಾಯವಾದಿ ಎಂ.ವಿ. ಸೋಮಣ್ಣ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಈ ಮುಂಚೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಅಲ್ಲದೇ ಈ ಮುಂಚಿನ ಅಧಿಕಾರಿಯನ್ನು ಜೈಲಿಗೆ ಕಳಿಸಲು ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಆಗ ಕಾಲಾವಕಾಶ ಕೇಳಿದ್ದರಿಂದ ಬಂಧನಕ್ಕೆ ತಡೆನೀಡಲಾಗಿತ್ತು. ಇಷ್ಟಾದರೂ ಅಧಿಕಾರಿಗಳು ಬಾಕಿ ಬಿಲ್‌ ಪಾವತಿಸುವಲ್ಲಿ ವಿಳಂಬ ಮಾಡಿದ್ದರು. ಕಚೇರಿ ಜಪ್ತಿ ಮಾಡಲು ಕಚೇರಿಯಲ್ಲಿ ಯಾವ ವಸ್ತುಗಳು ಉಳಿದಿಲ್ಲ. ಹೀಗಾಗಿ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರನ್ನು ಬಂಧಿಸಲು ಆದೇಶಿಸಿತ್ತು. ಆಗ ಎಂಜಿನಿಯರ್‌ ಪರ ವಕೀಲರು 15 ದಿನ ಕಾಲಾವಕಾಶ ಕೋರಿದರು. ಆದರೆ, ಅದನ್ನು ಮಾನ್ಯ ಮಾಡದ ನ್ಯಾಯಾಲಯ ಎಂಜಿನಿಯರ್‌ ಕೂಡಲೇ ಜೈಲಿಗೆ ಒಯ್ಯುವಂತೆ ಪೊಲೀಸರಿಗೆ ಆದೇಶ ನೀಡಿದೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಮಾಡಿದ ಕೆಲಸಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಲಕ್ಷದ ಲೆಕ್ಕದಲ್ಲಿದ್ದ ಮೊತ್ತ ಕೋಟಿ ಮುಟ್ಟಿದ್ದು ಒಂದೆಡೆಯಾದರೆ, ಮತ್ತೊಂದೆಡೆ ನಿರ್ಲಕ್ಷ ತೋರಿದ ಅಧಿಕಾರಿಯನ್ನು ಜೈಲಿಗೆ ಕಳಿಸಿದ್ದು ಉಳಿದೆಲ್ಲ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.