ಸಾರಾಂಶ
ನಿಷೇಧಿತ ಇ-ಸಿಗರೆಟ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಿಷೇಧಿತ ಇ-ಸಿಗರೆಟ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಪುಲಕೇಶಿನಗರದ ಕೋಲ್ಸ್ ರಸ್ತೆಯ ಆಲ್ ಅಬ್ರಾ ಗಿಫ್ಟ್ ಅಂಗಡಿಯಲ್ಲಿ ನಿಷೇಧಿತ ವಿದೇಶಿ ಇ-ಸಿಗರೆಟ್ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ದಾಳಿ ವೇಳೆ ₹1 ಲಕ್ಷ ಮೌಲ್ಯದ 225 ಪ್ಯಾಕ್ ವಿದೇಶಿ ಸಿಗರೇಟ್‌ಗಳು, 7 ವಿದೇಶಿ ಸಿಗರೆಟ್ ಬಾಕ್ಸ್‌ಗಳು, 130 ಇ-ಸಿಗರೆಟ್, 110 ಇ-ಸಿಗರೆಟ್ ಪ್ಲೇವರ್‌ಗಳು ಹಾಗೂ ₹1,400 ನಗದು ಜಪ್ತಿ ಮಾಡಲಾಗಿದೆ. ಈ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮತ್ತೊಂದು ಪ್ರಕರಣದಲ್ಲಿ ಇಂದಿರಾನಗರದ ಸಿಎಂಎಚ್ ರಸ್ತೆಯ ಅಂಗಡಿಯಲ್ಲಿ ಅಕ್ರಮವಾಗಿ ನಿಷೇಧಿತ ಇ-ಸಿಗರೆಟ್ ದಾಸ್ತಾನು ಮಾಡಿಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಂಗಡಿ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿ ವೇಳೆ ₹2.50 ಲಕ್ಷ ಮೌಲ್ಯದ 250 ಇ-ಸಿಗರೆಟ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.