ಸಿಎಂ, ಡಿಸಿಎಂ, ಸಚಿವರ ವಿರುದ್ಧ ವಿಡಿಯೋ ಹರಿಬಿಟ್ಟವನ ಬಂಧನ

| Published : Dec 06 2024, 08:57 AM IST

ಸಾರಾಂಶ

ಸಿಎಂ, ಡಿಸಿಎಂ, ಗೃಹ ಸಚಿವ, ಸಣ್ಣ ನೀರಾವರಿ ಸಚಿವ, ವಸತಿ ಸಚಿವ, ಇಂಧನ ಸಚಿವ ಸೇರಿ ೧೫ ಕ್ಕೂ ಅಧಿಕ ಸಚಿವರ ವಿರುದ್ಧ ಅವಾಚ್ಯ ಶಬ್ದದಿಂದ ನಿಂದಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತಲೆಮರೆಸಿಕೊಂಡಿದ್ದ ಬಿಜೆಪಿ ಸಂಘಟಕನನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.ದಾಬಸ್‌ಪೇಟೆ ತಾಲೂಕಿನ ನಲ್ಲೂರಿನ ಮೋಹಿತ್ ನರಸಿಂಹಮೂರ್ತಿ ಬಂಧಿತ ಆರೋಪಿ. ಈತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿ 15 ಸಚಿವರ ವಿರುದ್ಧ ವಿಡಿಯೋ ಮಾಡಿ ಹರಿದುಬಿಟ್ಟದ್ದನು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಸಿಎಂ, ಡಿಸಿಎಂ, ಗೃಹ ಸಚಿವ, ಸಣ್ಣ ನೀರಾವರಿ ಸಚಿವ, ವಸತಿ ಸಚಿವ, ಇಂಧನ ಸಚಿವ ಸೇರಿ ೧೫ ಕ್ಕೂ ಅಧಿಕ ಸಚಿವರ ವಿರುದ್ಧ ಅವಾಚ್ಯ ಶಬ್ದದಿಂದ ನಿಂದಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತಲೆಮರೆಸಿಕೊಂಡಿದ್ದ ಬಿಜೆಪಿ ಸಂಘಟಕನನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.ದಾಬಸ್‌ಪೇಟೆ ತಾಲೂಕಿನ ನಲ್ಲೂರಿನ ಮೋಹಿತ್ ನರಸಿಂಹಮೂರ್ತಿ ಬಂಧಿತ ಆರೋಪಿ. ಈತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿ 15 ಸಚಿವರ ವಿರುದ್ಧ ವಿಡಿಯೋ ಮಾಡಿ ಹರಿದುಬಿಟ್ಟದ್ದನು. ಜಿಲ್ಲೆಯ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತನಾಗಿ ಕೆಲಸ ಮಾಡಿರುವ ಮೋಹಿತ್ ನರಸಿಂಹಮೂರ್ತಿ ಪ್ರಸ್ತುತ ಉತ್ತರಾಖಂಡದ ಉಕ್ಕಿಮಠದಲ್ಲಿ ಬಿಜೆಪಿ ಸಂಘಟಕನಾಗಿ ಕೆಲಸ ಮಾಡುತ್ತ ಜೀವನಕ್ಕಾಗಿ ಟೀ ಅಂಗಡಿ ಇಟ್ಟುಕೊಂಡಿದ್ದ ಎನ್ನಲಾಗಿದೆ..

ಲೋಕಸಭೆಗೆ ಸ್ಪರ್ಧಿಸಿದ್ದ ಮೋಹಿತ್: ಆರೋಪಿ ಮೋಹಿತ್ ನರಸಿಂಹಮೂರ್ತಿ 2024ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೊಳಲು ಚಿಹ್ನೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದನು. ಪ್ರಸ್ತುತ ಉತ್ತರಾಖಂಡದಲ್ಲಿ ಬಿಜೆಪಿ ಸಂಘಟಕನಾಗಿ ಪ್ರಚಾರದಲ್ಲಿ ನಿರತನಾಗಿದ್ದ ಎನ್ನಲಾಗಿದೆ.10 ಜಿಲ್ಲೆಯಲ್ಲಿ 15 ಕೇಸ್‌ ದಾಖಲು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಕಲಬುರ್ಗಿ, ಶಿವಮೊಗ್ಗ, ಬೆಳಗಾವಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಮೊಹಿತ್ ನರಸಿಂಹಮೂರ್ತಿ ವಿರುದ್ಧ ಭಾರತೀಯ ನಾಗರೀಕ ಸುರಕ್ಷಾ ಕಾಯ್ದೆಯಡಿ ಒಟ್ಟು 12 ಕೇಸ್‌ ದಾಖಲಾಗಿವೆ. ಉತ್ತರಾಖಂಡದ ಚಾರದಾಮ ಯಾತ್ರೆ ಮಾಡಿಸುವ ಆಮಿಷವೊಡ್ಡಿ ಕರ್ನಾಟಕದ 10 ಭಕ್ತರಿಗೆ ಪಂಗನಾಮ ಹಾಕಿದ ಹಿನ್ನೆಲೆ 3 ಮೋಸದ ಕೇಸ್‌ ದಾಖಲಾಗಿವೆ.ಉತ್ತರಾಖಂಡದಲ್ಲಿ ಬಂಧನ: ಎಸ್ಪಿ ಅಶೋಕ್‌ ವೆಂಕಟ್ ಆದೇಶದ ಮೇಲೆ ಸಿಪಿಐಗಳಾದ ಅವಿನಾಶ್, ರಾಘವೇಂದ್ರ, ಪಿಎಸ್‌ಐ ಚೇತನಗೌಡ, ಕ್ರೈಂ ಸಿಬ್ಬಂದಿಗಳಾದ ದೊಡ್ಡಲಿಂಗಪ್ಪ, ಸಿದ್ದರಾಮ ನೇತೃತ್ವದ ತಂಡ ಮೋಹಿತ್ ನರಸಿಂಹಮೂರ್ತಿಯನ್ನು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆ ಚಮೋಲಿ ತಾಲೂಕಿನ ಉಕ್ಕಿಮಠದ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಂಧಿಸಿದ್ದಾರೆ.ಎಸ್ಪಿ ಅಶೋಕ್‌ ವೆಂಕಟ್, ಎಎಸ್ಪಿ ಮರೀಯಪ್ಪ, ಡಿವೈಎಸ್ಪಿ ರಾಮಚಂದ್ರಪ್ಪ ಕೊರಟಗೆರೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕೊರಟಗೆರೆ ಠಾಣೆಯಲ್ಲಿ ಮೋಹಿತ್ ನರಸಿಂಹಮೂರ್ತಿ ವಿರುದ್ದ ಕೇಸ್‌ ದಾಖಲಾಗಿದೆ.ಸಿಎಂ, ಡಿಸಿಎಂ, ಸೇರಿ 15ಕ್ಕೂ ಹೆಚ್ಚು ಸಚಿವರ ಬಗ್ಗೆ ಮೊಹೀತ್ ವಿಡಿಯೋ ಮಾಡಿ ಹರಿಬಿಟ್ಟಿದ್ದನು. ದೂರು ನೀಡಿದ್ದರಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅರಕೆರೆಶಂಕರ್ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಕೊರಟಗೆರೆ