11 ಲಕ್ಷ ನಗದು ಕಳ್ಳತನ ಮಾಡಿದ್ದ ಆರೋಪಿಯ ಬಂಧನ

| Published : Dec 16 2023, 02:00 AM IST

ಸಾರಾಂಶ

ರಾತ್ರಿ ವೇಳೆ ಅಂಗಡಿಯ ಮೇಲ್ಚಾವಣಿಯ ತಗಡಿನ ಶೀಟ್ ಕಿತ್ತು ಅಂಗಡಿ ಒಳಗೆ ನುಗ್ಗಿ, ನಗದು ದೋಚಿ ಪರಾರಿಯಾಗಿದ್ದ ಆರೋಪಿ ಪಿ.ಎಸ್. ಮಹೇಶ್, ಚಾಲಕ ಹಾಗೂ ಮರಗೆಲಸ ವೃತ್ತಿ ಮಾಡುತ್ತಿದ್ದು, ಬಾಗೇಪಲ್ಲಿ ತಾಲೂಕಿನ ಪರಗೋಡು ಹೋಬಳಿಯ ಪುಲವಾರಪಲ್ಲಿ ಗ್ರಾಮದವನೆಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ನಗರದ ದಿಬ್ಬೂರಹಳ್ಳಿ ಬೈಪಾಸಿನ ಪೂಜಮ್ಮ ದೇವಾಲಯ ಬಳಿಯ ಮಂಜುನಾಥ್ ಸ್ಟೀಲ್ ಟ್ರೇಡರ್ಸ್ ಅಂಗಡಿಯಲ್ಲಿ ಡಿ. 2 ರಂದು 11 ಲಕ್ಷ ನಗದು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ವೇಳೆ ಅಂಗಡಿಯ ಮೇಲ್ಚಾವಣಿಯ ತಗಡಿನ ಶೀಟ್ ಕಿತ್ತು ಅಂಗಡಿ ಒಳಗೆ ನುಗ್ಗಿ, ನಗದು ದೋಚಿ ಪರಾರಿಯಾಗಿದ್ದ ಆರೋಪಿ ಪಿ.ಎಸ್. ಮಹೇಶ್, ಚಾಲಕ ಹಾಗೂ ಮರಗೆಲಸ ವೃತ್ತಿ ಮಾಡುತ್ತಿದ್ದು, ಬಾಗೇಪಲ್ಲಿ ತಾಲೂಕಿನ ಪರಗೋಡು ಹೋಬಳಿಯ ಪುಲವಾರಪಲ್ಲಿ ಗ್ರಾಮದವನೆಂದು ಪೊಲೀಸರು ತಿಳಿಸಿದ್ದಾರೆ.

ಕಳವು ಮಾಡಿಕೊಂಡು ಹೋಗಿದ್ದ ಒಟ್ಟು ಹಣದ ಪೈಕಿ 4,12,00 ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಕಳವು ಮಾಡಿದ್ದ ಹಣದಲ್ಲಿ ಖರೀದಿಸಿದ ವಿವೋ ಕಂಪೆನಿಯ ಎರಡು ಮೊಬೈಲ್ ಫೋನ್‌ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಯಲಹಂಕ ನ್ಯೂಟೌನ್ ಠಾಣಾ ಸರಹದ್ದಿನಲ್ಲಿ ಕಳವು ಮಾಡಿಕೊಂಡು ಬಂದಿದ್ದ ಟಾಟಾ ಏಸ್ ವಾಹನ ಸಹ ವಶಪಡಿಸಿಕೊಂಡಿದ್ದಾರೆ. ಈ ಆರೋಪಿಯ ಮೇಲೆ ಯಲಹಂಕ, ಗುಡಿಬಂಡೆ, ಚಿಂತಾಮಣಿ, ಹೊಸಕೋಟೆ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ದೂರು ದಾಖಲಾಗಿವೆ. ಆರೋಪಿಯು ಅಂತರ ಜಿಲ್ಲಾ ಕಳ್ಳನಾಗಿರುವುದರಿಂದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹಾಗೂ ಕದ್ದ ಮಾಲನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಅಧೀಕ್ಷಕ ಡಿ.ಎಲ್. ನಾಗೇಶ್ ಮತ್ತು ಚಿಂತಾಮಣಿ ಉಪವಿಭಾಗದ ಡಿ.ವೈ.ಎಸ್.ಪಿ ಮುರಳೀಧರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ಪಿ.ಎಸ್.ಐ ಪುನೀತ್ ನಂಜರಾಯ್, ಸಿಬ್ಬಂದಿ ನಂದಕುಮಾರ್, ವೀರಭದ್ರಸ್ವಾಮಿ, ಮುರಳಿಕೃಷ್ಣ, ಲಕ್ಷ್ಮಿ, ಕೃಷ್ಣಪ್ಪ, ನಾರಾಯಣ, ಮಾರುತಿ, ಚಂದಪ್ಪ, ಅಂಬರೀಷ, ರವಿಕುಮಾರ್, ಮುರಳೀಕೃಷ್ಣ ಯಶಸ್ವಿಯಾಗಿದ್ದಾರೆ.

---ಆರೋಪಿ ಮಹೇಶ್