ಸಾರಾಂಶ
ಮೂರು ದಿನಗಳ ಬಳಿಕ ಚಂದಿಕಾ ಶವ ಪೂರ್ಣಪ್ರಜ್ಞ ಕಾನ್ವೆಂಟ್ ಸಮೀಪದ ಕೊಲ್ಲಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶಿವಕುಮಾರ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ಪಾನಮತ್ತರಾಗಿದ್ದ ದಂಪತಿಯ ನಡುವೆ ನಡೆದ ಕಲಹದಲ್ಲಿ ಪತಿ ತನ್ನ ಸಹಚರನೊಂದಿಗೆ ಸೇರಿ ಪತ್ನಿಯನ್ನು ಹತ್ಯೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಮದ್ದೂರು ಪೊಲೀಸರು ಸಫಲರಾಗಿದ್ದಾರೆ.ಉತ್ತರ ಭಾರತದ ಛತ್ತೀಸ್ ಗಡದ ಭಯಂಕರ್ ಧ್ರುವ ತನ್ನ ಪತ್ನಿ ಚಂದ್ರಿಕಾ ಅಲಿಯಾಸ್ ಲಕ್ಷ್ಮೀ (35) ಅವರನ್ನು ತನ್ನ ಸ್ನೇಹಿತ ಆಂಧ್ರದ ಕರ್ನೂಲ್ ಜಿಲ್ಲೆಯ ಗೋವಿಂದರಾಜು ಸಹಕಾರದಿಂದ ಕೊಲೆ ಮಾಡಿದ್ದ ಆರೋಪದಡಿ ಬಂಧಿಸಲಾಗಿದೆ. ಪಟ್ಟಣದ ಜೆಎಂಎಫ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಟ್ಟಣದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಆರೋಪಿ ಭಯಂಕರ ಧ್ರುವ ಹಾಗೂ ಈತನ ಪತ್ನಿ ಚಂದ್ರಿಕಾ ನಡುವೆ ಪಾನಮತ್ತರಾಗಿದ್ದ ವೇಳೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಭಯಂಕರ ಧ್ರುವ ಚಂದ್ರಿಕಾಳನ್ನು ಕೊಲೆ ಮಾಡಿ ಗೋವಿಂದರಾಜು ಸಹಾಯದಿಂದ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಕೊಲ್ಲಿ ನದಿಗೆ ಎಸೆದು ಪರಾರಿಯಾಗಿದ್ದನು.ಮೂರು ದಿನಗಳ ಬಳಿಕ ಚಂದಿಕಾ ಶವ ಪೂರ್ಣಪ್ರಜ್ಞ ಕಾನ್ವೆಂಟ್ ಸಮೀಪದ ಕೊಲ್ಲಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶಿವಕುಮಾರ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದರು.
ಪಿಎಸ್ಐ ಮಂಜುನಾಥ್, ಅಪರಾಧ ವಿಭಾಗದ ಪಿಎಸ್ಐ ರವಿ, ಎಎಸ್ಐ ಗಳಾದ ಶ್ರೀನಿವಾಸ ಆಚಾರಿ, ವೆಂಕಟೇಶ್, ಸಿಬ್ಬಂದಿ ಕುಮಾರಸ್ವಾಮಿ, ಪ್ರಸನ್ನ, ವಿಷ್ಣುವರ್ದನ ಹಾಗೂ ರೇವಣ್ಣ ಅವರು ಕಾರ್ಯಾಚರಣೆ ನಡೆಸಿ ಪಟ್ಟಣದ ಶಾಂತಿ ವೈನ್ ಸ್ಟೋರ್ ನಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.