ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ತ್ರಿವಳಿ ತಲಾಖ್ ಹೇಳಿ ಪತ್ನಿಯನ್ನು ಮನೆಯಿಂದ ಹೊರಹಾಕಿದ ಘಟನೆ ಉಳ್ಳಾಲ ಸಮ್ಮರ್ ಸ್ಯಾಂಡ್ ಬಳಿ ನಡೆದಿದ್ದು ಆರೋಪಿ ಮೊಹಮ್ಮದ್ ದಿಲ್ಫಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.ಮೊಹಮ್ಮದ್ ದಿಲ್ಫಾಜ್ ವಿರುದ್ಧ ಆತನ ಪತ್ನಿ ಹೀನಾ ಫಾತಿಮಾ ಅವರು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.2019ರ ಏ.20ರಂದು ದಿಲ್ಫಾಜ್‌ನನ್ನು ಪ್ರೀತಿಸಿ ಮದುವೆಯಾಗಿದ್ದು ಆತನಿಗೆ ಮದುವೆಯ ಸಮಯದಲ್ಲಿ ನನ್ನ ತಂದೆ 22 ಪವನ್ ಚಿನ್ನ ಹಾಕಿದ್ದರು. ಅಲ್ಲದೆ ದಿಲ್ಫಾಜ್‌ಗೆ ವಾಚ್ ಖರೀದಿಸಲು 50,000 ರು.ಗಳನ್ನು ಕೇಳಿ ಪಡೆದುಕೊಂಡಿದ್ದ. ಮದುವೆಯಾದ ಬಳಿಕ ನನ್ನ ಜತೆ ಸ್ವಲ್ಪ ಕಾಲ ಚೆನ್ನಾಗಿದ್ದ. ಬಳಿಕ ಅನ್ಯ ಮಹಿಳೆಯರ ಜತೆಯಲ್ಲಿ ಅನೈತಿಕ ಸಂಬಂಧ ಹೊಂದಲು ಪ್ರಾರಂಭಿಸಿದ್ದ. ಈ ವಿಚಾರದ ಬಗ್ಗೆ ಕೇಳಿದಾಗ ದೈಹಿಕ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಈ ಬಗ್ಗೆ ಕುಟುಂಬದ ಹಿರಿಯರು ರಾಜಿ ಪಂಚಾಯಿತಿಕೆ ನಡೆಸಿ ದಿಲ್ಫಾಜ್‌ನಿಗೆ ಬುದ್ದಿಮಾತು ಹೇಳಿದ್ದರು. ಆದರೂ ಆತನ ಚಾಳಿ ಮುಂದುವರೆಸಿದ್ದ. ನ.8ರಂದು ನನ್ನ ತಂದೆ ದಿಲ್ಫಾಝ್‌ನಲ್ಲಿ ಈ ಬಗ್ಗೆ ವಿಚಾರಿಸಿದಾಗ ದಿಲ್ಫಾಜ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ನನ್ನ ತಂದೆಯನ್ನು ಮನೆಗೆ ಬರಲು ಹೇಳಿ ತಂದೆಯ ಎದುರಿನಲ್ಲಿ ಮೂರು ಬಾರಿ ತಲಾಖೆ ಹೇಳಿ, ಇನ್ನು ಮುಂದಕ್ಕೆ ನೀನು ನನ್ನ ಹೆಂಡತಿಯಲ್ಲ ಎಂದು ಹೇಳಿ ಮನೆಯಿಂದ ಹೊರಗೆ ಹಾಕಿದ್ದಾನೆ. ದಿಲ್ಫಾಝ್‌ನ ತಂದೆ ಉಮರಬ್ಬ ಸರಿಯಾದ ವರದಕ್ಷಿಣೆ ಸಿಗಲಿಲ್ಲ ಎಂದು ಆಗಾಗ ಮಾನಸಿಕ ಕಿರುಕುಳ ನೀಡುತ್ತಿದ್ದರು. ನನ್ನ ಅಜ್ಜಿ ನನ್ನ ಹೆಸರಿನಲ್ಲಿ ಹೂಡಿಕೆ ಮಾಡಿ, ಅದು ಮೆಚೂರ್ಡ್ ಆದ ಅನಂತರ ಬರುವ 8 ಲ.ರೂ.ಗಳನ್ನು ನೀಡಬೇಕೆಂದು ಕಿರುಕುಳ ನೀಡಿದ್ದಾರೆ ಎಂದು ಹೀನಾ ಫಾತಿಮಾ ಅವರು ನೀಡಿರುವ ದೂರಿನಂತೆ ಎಫ್‌ಐಆರ್ ದಾಖಲಾಗಿತ್ತು.ಆರೋಪಿ ವಿರುದ್ಧ ಭಾರತೀಯ ನ್ಯಾಯಸಂಹಿತೆ(ಬಿಎನ್‌ಎಸ್) 2023ರ ಅಡಿಯಲ್ಲಿ ಕಲಂ 85, 115(2) ಅಡಿ, ವರದಕ್ಷಿಣೆ ನಿಷೇಧ ಕಾಯಿದೆ 1961ರ ಕಲಂ 3,4 ಮತ್ತು ಮುಸ್ಲಿಂ ಮಹಿಳೆಯರ(ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ 2019ರ ಕಲಂ 4ರ ಅಡಿಯಲ್ಲಿ ದಿಲ್ಫಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
---------------