ಹನೂರಿನಲ್ಲಿ ಅಕ್ರಮ ಶ್ರೀಗಂಧ ಸಾಗಾಟ ಮಾಡುತ್ತಿದ್ದ ಕಳ್ಳರ ಬಂಧನ

| Published : Sep 10 2024, 01:34 AM IST

ಹನೂರಿನಲ್ಲಿ ಅಕ್ರಮ ಶ್ರೀಗಂಧ ಸಾಗಾಟ ಮಾಡುತ್ತಿದ್ದ ಕಳ್ಳರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜೀಪುರ ಗ್ರಾಮದ ಕಡೆಯಿಂದ ಮಂಚಾಪುರ ಗ್ರಾಮದ ಹೊರವಲಯದಲ್ಲಿನ ಉಡುತೊರೆ ಜಲಾಶಯದ ಚಾನೆಲ್ ರಸ್ತೆ ಮಾರ್ಗವಾಗಿ ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹನೂರಿನ ರಾಮಾಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹನೂರು: ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ರಾಮಾಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ರಾಮಾಪುರ ಗ್ರಾಪಂ ವ್ಯಾಪ್ತಿಯ ಮುತ್ತು ಶೆಟ್ಟಿಯೂರು ಗ್ರಾಮದ ಸೇಟು, ವಿಜಯ್ ಅಲಿಯಾಸ್ ವಿಜಿ ಬಂಧಿತರು.

ಘಟನೆ ವಿವರ: ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜೀಪುರ ಗ್ರಾಮದ ಕಡೆಯಿಂದ ಮಂಚಾಪುರ ಗ್ರಾಮದ ಹೊರವಲಯದಲ್ಲಿನ ಉಡುತೊರೆ ಜಲಾಶಯದ ಚಾನೆಲ್ ರಸ್ತೆ ಮಾರ್ಗವಾಗಿ ರಾಮಾಪುರ ಗ್ರಾಮದ ಕಡೆಗೆ ದ್ವಿಚಕ್ರ ವಾಹನದಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಹಾಗೂ ಪ್ರಭಾರ ಇನ್ಸ್‌ಪೆಕ್ಟರ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ರಾಮಾಪುರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಈಶ್ವರ್, ಅಪರಾಧ ವಿಭಾಗದ ಲೋಕೇಶ್ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ ಸ್ಕೂಟಿ ಮಾದರಿಯ (ದ್ವಿಚಕ್ರ ವಾಹನ) ಮೊಪೆಡ್ ಮೋಟಾರ್ ಬೈಕ್ ನಲ್ಲಿ ಸಾಗಾಟ ಮಾಡುತ್ತಿದ್ದ 75,000 ಸಾವಿರ ಮೌಲ್ಯದ 15 ಕೆಜಿ 30 ಗ್ರಾಂ ಶ್ರೀಗಂಧದ 36 ತುಂಡುಗಳು, 350 ಗ್ರಾಂ ತೂಕದ ಶ್ರೀಗಂಧದ ಚೆಕ್ಕೆಗಳನ್ನು ಮಾಲು ಸಮೇತ ಮಚ್ಚು ಹಾಗೂ ಒಂದು ಗರಗಸ ಪರಿಕರಗಳನ್ನು ವಶಕ್ಕೆ ಪಡೆದುಕೊಂಡು, ಪ್ರಕರಣ ದಾಖಲಿಸಿದ್ದಾರೆ.

ಹಣದಾಸೆಗೆ ಶ್ರೀಗಂಧ ಕಳವು:

ಶ್ರೀಗಂಧದ ತುಂಡುಗಳನ್ನು ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಿಪುರ ಗ್ರಾಮದ ರೈತ ನೀಲಿಸಿದ್ದ ಜಮೀನಿನಲ್ಲಿ ಕಳವು ಮಾಡಿರುವ ಬಗ್ಗೆ ಪೊಲೀಸರ ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಬಂಧಿತ ವ್ಯಕ್ತಿಗಳು ಹಣದಾಸೆಗೆ ಶ್ರೀಗಂಧದ ಮರ ಕಡಿದು ತುಂಡುಗಳಾಗಿ ಪರಿವರ್ತಿಸಿ ಸಾಗಾಟ ಮಾಡುವ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.

ದಾಳಿಯಲ್ಲಿ ಮುಖ್ಯಪೇದೆ ಸಿದ್ದೇಶ್ ಕುಮಾರ್, ಲಿಯಾಖತ್ ಅಲಿಖಾನ್, ಮಹೇಂದ್ರ, ಗಿರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.