ಸಾರಾಂಶ
ವಿಜಯಪುರ : ನಿಷ್ಕರ್ಷ ಚಿತ್ರದ ಮಾದರಿಯಲ್ಲಿ ಕಳೆದ ಮೇ 25ರಂದು ಮನಗೂಳಿಯಲ್ಲಿ ನಡೆದ ಕೆನರಾ ಬ್ಯಾಂಕ್ ಲೂಟಿ ಪ್ರಕರಣದ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಕೆನರಾ ಬ್ಯಾಂಕ್ ಆರೋಪಿಗಳೆಲ್ಲ ಡಿಪ್ಲೊಮಾ, ಡಬಲ್ ಡಿಗ್ರಿ, ಡಾಕ್ಟರೇಟ್ ಮಾಡಿದವರಾಗಿದ್ದು, ಪ್ರಮುಖ ಹುದ್ದೆಗಳಲ್ಲಿದ್ದಾರೆ. ಬಾಲರಾಜ ಯರಿಕುಲಾ, ಗುಂಡು ಜೋಸೆಫ್, ಚಂದನರಾಜ ಪಿಳೈ, ಇಜಾಜ್ ಧಾರವಾಡ, ಪೀಟರ್ ಜಯಚಂದ್ರಪಾಲ್, ಸುಸೈರಾಜ್ ಡ್ಯಾನಿಯಲ್, ಬಾಬುರಾವ್ ಮಿರಿಯಾಲ, ಮೊಹಮ್ಮದ ಆಸೀಫ್ ಕಲ್ಲೂರ, ಅನೀಲ ಮಿರಿಯಾಲ, ಅಬು ಯಶ್‌ಮಾಲಾ, ಸೋಲೋಮನ ವೆಸ್ಲಿ ಪಲುಕುರಿ, ಮರಿಯಾದಾಸ ಗೋನಾ ಬಂಧಿತರು. ಕಳೆದ ತಿಂಗಳು ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ ಮಿರಿಯಾಲ್, ಆತನ ಸ್ನೇಹಿತ ಚಂದ್ರಶೇಖರ ನರೇಲಾ ಹಾಗೂ ಸುನೀಲ ಮೋಕಾನನ್ನು ಬಂಧಿಸಲಾಗಿತ್ತು. ಇನ್ನೂ ಮೂರ್ನಾಲ್ಕು ಜನರ ಬಂಧನ ಸಾಧ್ಯತೆ ಇದೆ.
ಒಟ್ಟು ₹39.26 ಕೋಟಿ ಜಪ್ತಿ:
ಈ ಮೊದಲು ಬಂಧಿತರಾಗಿದ್ದ ಆರೋಪಿಗಳಿಂದ ₹10.5 ಕೋಟಿ ಮೌಲ್ಯದ ಬಂಗಾರ ಹಾಗೂ ₹5 ಲಕ್ಷ ಹಣ ವಶಕ್ಕೆ ಪಡೆಯಲಾಗಿತ್ತು. ಈಗ ಬಂಧಿತರಾದವ 12 ಆರೋಪಿಗಳಿಂದ 29 ಕೆಜಿ ಬಂಗಾರ ಹಾಗೂ ₹1.16 ಕೋಟಿ ವಶಕ್ಕೆ ಪಡೆಯುವ ಮೂಲಕ 39 ಕೆಜಿ ಚಿನ್ನಾಭರಣ ಸೇರಿ ಒಟ್ಟು ₹39.26 ಕೋಟಿ ಸ್ವತ್ತು ವಶಕ್ಕೆ ಪಡೆದಂತಾಗಿದೆ. ಜತೆಗೆ 2 ಇನೋವಾ ಸೇರಿ 5 ಕಾರು ಹಾಗೂ ರೇಲ್ವೆ ಇಲಾಖೆ ಲಾರಿ, ಬಂಗಾರ ಕರಗಿಸುವ ಸಾಧನಗಳು, ಗ್ಯಾಸ್ ಸಿಲಿಂಡರ್, ಆಕ್ಸಿಜನ್ ಸಿಲಿಂಡರ್, 4 ವಾಕಿಟಾಕಿಗಳು, ಪಿಸ್ತೂಲ್ ಮಾದರಿಯ ನಕಲಿ ಲೈಟರ್ ಜಪ್ತಿ ಮಾಡಲಾಗಿದೆ.
ಕದ್ದ ಹಣ ಕ್ಯಾಸಿನೋಗೆ ಬಳಕೆ:
ಪ್ರಕರಣದ ಪ್ರಮುಖ ಆರೋಪಿ ಚಂದ್ರಶೇಖರ ನೆರೆಲ್ಲಾ ಕ್ಯಾಸಿನೋ ವ್ಯಸನಿಯಾಗಿದ್ದು, ಆತನಿಂದಾಗಿ ಸಹಚರರೆಲ್ಲರೂ ಕೆನರಾ ಬ್ಯಾಂಕ್‌ನಿಂದ ಕದ್ದ ₹1.16 ಕೋಟಿ ಹಣವನ್ನೂ ಗೋವಾದ ಕ್ಯಾಸಿನೋದಲ್ಲಿ ಡೆಪಾಸಿಟ್ ಮಾಡಿದ್ದರು. ಪೊಲೀಸರು ಆ ಹಣ ಜಪ್ತಿ ಮಾಡಿದ್ದಾರೆ.