ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಪೊಲೀಸರು ₹3 ಕೋಟಿ ಮೌಲ್ಯದ 5140 ಮೊಬೈಲ್ಗಳನ್ನ ಕದ್ದಿದ್ದ ಏಳು ಕಳ್ಳರ ಬಂಧಿಸಿದ್ದಾರೆ.ಕಳೆದ ವರ್ಷ ನವೆಂಬರ್ 22 ರಂದು ಸೇಪ್ ಸೀಡ್ಸ್ ಕ್ಯಾರಿಯರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಂಟೇನರ್ ವಾಹನದಲ್ಲಿ ರೆಡ್ ಮೀ ಮೊಬೈಲ್ ನ 170 ಬಾಕ್ಸ್ ಗಳನ್ನು (3400 ಮೊಬೈಲ್) ಹಾಗೂ 163 ಬಾಕ್ಸ್ ಪೋಕೋ ಮೊಬೈಲ್ (3260 ಮೊಬೈಲ್) ಒಟ್ಟು 6660 ಅಂದಾಜು ₹3 ಕೋಟಿ ಮೌಲ್ಯದ ಮೊಬೈಲ್ ಗಳನ್ನು ಹೊತ್ತು ಉತ್ತರಪ್ರದೇಶದ ನೊಯ್ಡಾದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ 44 ರ ಮೂಲಕ ಬರುತ್ತಿತ್ತು. ಇನ್ನೇನು, ಕೇವಲ 70 ಕಿಮೀ ಸಾಗಿದರೆ ಬೆಂಗಳೂರು ತಲುಪಬೇಕಿತ್ತು. ಆದರೆ, ದಿನ ಕಳೆದರೂ ಟ್ರಕ್ ಬೆಂಗಳೂರು ತಲುಪಲೇ ಇಲ್ಲ. ಹೀಗಾಗಿ ಸೇಪ್ ಸೀಡ್ಸ್ ಕ್ಯಾರಿಯರ್ಸ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಜಿಪಿಎಸ್ ಆಧರಿಸಿ ಚೆಕ್ ಮಾಡಿದಾಗ ಟ್ರಕ್ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾವೊಂದರ ಬಳಿ ನಿಲ್ಲಿಸಲಾಗಿತ್ತು.
ಸ್ಥಳಕ್ಕೆ ಹೋಗಿ ನೋಡಿದಾಗ ಟ್ರಕ್ ಇದೆ, ಆದರೆ, ಚಾಲಕ ಇರಲಿಲ್ಲ. ಟ್ರಕ್ ಚಾಲಕನ ಕ್ಯಾಬಿನ್ ನಿಂದ ರಂದ್ರ ಕೊರೆಯಲಾಗಿತ್ತು. ಮೊಬೈಲ್‌ಗಳನ್ನು ಮತ್ತೊಂದು ಟ್ರಕ್ಗೆ ತುಂಬಿಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು. 6660 ಮೊಬೈಲ್ಗಳ ಪೈಕಿ 5140 ಮೊಬೈಲ್‌ಗಳನ್ನು ಕಳವು ಮಾಡಲಾಗಿತ್ತು. ಉಳಿದ ಮೊಬೈಲ್ಗಳು ಟ್ರಕ್ನಲ್ಲಿ ಉಳಿದುಕೊಂಡಿದ್ದವು.ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೇರೇಸಂದ್ರ ಪೊಲೀಸರು ಗುಡಿಬಂಡೆ ಇನ್ಸ್ ಪೆಕ್ಟರ್ ನಯಾಜ್ ಬೇಗ್ ತನಿಖೆಯನ್ನು ಕೈಗೊಂಡು ಡಿಸೆಂಬರ್ 10 ರಂದು ಹರಿಯಾಣ ರಾಜ್ಯದ ಪಲ್ವಾಲ್ ಜಿಲ್ಲೆಯ ಅಲಿ ಮಿಯೋ ಗ್ರಾಮದ ರಾಹುಲ್ ಎಂಬುವವರನ್ನು ಬಂಧಿಸಿದ್ದರು.
ಜನವರಿ 29 ರಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಕೇಸಿನ ಕಡತವನ್ನು ಮುಂದಿನ ತನಿಖೆಗಾಗಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಿಗೆ ವರ್ಗಾವಣೆ ಮಾಡಿದ್ದರು. ತನಿಖೆ ಮುಂದುವರೆಸಿದ ಪೊಲೀಸ್ ಉಪಾಧೀಕ್ಷಕ ರವಿಕುಮಾರ್ ಕೆ.ವೈ, ಪೊಲೀಸ್ ಇನ್ಸ್ ಪೆಕ್ಟರ್ ಸೂರ್ಯ ಪ್ರಕಾಶ್ ಮತ್ತು ಸಿಬ್ಬಂದಿಯು ಎಸ್.ಪಿ. ಕುಶಾಲ್ ಚೌಕ್ಸೆ ರವರ ಮಾರ್ಗದರ್ಶನದಲ್ಲಿ ಹರಿಯಾಣ, ರಾಜಸ್ತಾನ್, ಹಿಮಾಚಲ ಪ್ರದೇಶ ಮತ್ತು ಪಶ್ಚಿಮಬಂಗಾಳದಲ್ಲಿ ತನಿಖೆ ನಡೆಸಿ ಉತ್ತರ ಈ ಪ್ರಕರಣದಲ್ಲಿ ಆರೋಪಿಗಳಾದ ಇಮ್ರಾನ್, ಮೊಹಮದ್ ಮುಸ್ತಫಾ, ಅನೂಪ್‌ರಾಯ್, ಅಭಿಜಿತ್ ಪೌಲ್, ಸಕ್ಕಲ್ಲಾ ಮತ್ತು ಯೂಸಫ್‌ಖಾನ್ ಎಂಬ ಭಾರತದ ಕುಖ್ಯಾತ ಏಳು ಜನ ದರೋಡೆಕೊರರ ಗ್ಯಾಂಗ್ ಅನ್ನು ಬಂಧಿಸಿ ಮಾಡಿ ಕಳುವು ಮಾಡಿದ್ದ ಮೊಬೈಲ್ ಗಳನ್ನು ಸಾಗಾಣಿಕೆ ಮಾಡಲು ಉಪಯೋಗಿಸಿದ್ದ ಟ್ರಕ್ ವಾಹನವನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳು ಕಳುವು ಮಾಡಿದ ಮೊಬೈಲ್‌ಗಳನ್ನು ದೆಹಲಿಯಲ್ಲಿ ಮಾರಾಟ ಮಾಡಿದ್ದು, ಅಲ್ಲಿಂದ ದೇಶದ ಪ್ರತಿ ರಾಜ್ಯಗಳಿಗೆ 300 ರಿಂದ 400 ಮೊಬೈಲ್ ಗಳಂತೆ ಬಿಡಿಬಿಡಿಯಾಗಿ ಮಾರಾಟ ಮಾಡಿದ್ದರು. ಕಳುವು ಮಾಡಲಾದ ಎಲ್ಲಾ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.