ಎಂಡಿಎಂಎ ಮಾರಾಟ: ಇಬ್ಬರು ಕುಖ್ಯಾತರ ಬಂಧನ

| Published : Jan 04 2024, 01:45 AM IST

ಸಾರಾಂಶ

ಮಂಗಳೂರು ನಗರದಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಕುಖ್ಯಾತರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಾದಕ ವಸ್ತುವಾದ ಎ೦ಡಿಎ೦ಎ ಮಾರಾಟ ಮಾಡುತ್ತಿ ಇಬ್ಬರು ಕುಖ್ಯಾತ ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸರು ಬ೦ಧಿಸಿದ್ದಾರೆ.

ಸುರತ್ಕಲ್ ಕಾಟಿಪಳ್ಳದ ಅಶ್ಪಾಕ್‌ ಯಾನೆ ಜುಟ್ಟು ಅಶ್ಪಾಕ(27)ಹಾಗೂ ಉಮರ್ ಫಾರೂಕ್ ಇರ್ಫಾನ್ (26) ಬ೦ಧಿತ ಆರೋಪಿಗಳು.

ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ರೈಲ್ವೆ ಬ್ರಿಜ್‌ನಿಂದ ಸರಿಪಳ್ಳಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಕಪ್ಪು ಬಣ್ಣದ ಹೊಂಡ ಆಕ್ಟಿವ್ ಸ್ಕೂಟರ್‌ನಲ್ಲಿ ಎ೦ಡಿಎ೦ಎ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಪೊಲೀಸ್‌ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬ೦ಧಿಸಿದರು. ಅವರಿಂದ 19 ಗ್ರಾಂ ಎ೦ಡಿಎ೦ಎ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಸ್ವಾಧೀನ ಪಡಿಸಿಕೊಂಡಿದೆ. ಇವುಗಳ ಒಟ್ಟು ಮೌಲ್ಯ 1,92,800 ರು. ಎ೦ದು ಅ೦ದಾಜಿಸಲಾಗಿದೆ.

ಆರೋಪಿ ಜುಟ್ಟು ಅಶ್ಪಕ್ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಕಂಕನಾಡಿ ನಗರ ಪೊಲೀಸ್ ಠಾಣೆ, ಉಳ್ಳಾಲ ಪೊಲೀಸ್ ಠಾಣೆ, ಸುರತ್ಕಲ್ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ ದರೋಡೆ ಸುಲಿಗೆ ದೋಂಬಿ ಸೇರಿ ಒಟ್ಟು 12 ಪ್ರಕರಣಗಳು ದಾಖಲಾಗಿರುತ್ತವೆ.

ಆರೋಪಿ ಉಮ್ಮರ್ ಫಾರೂಕ್ ಇರ್ಫಾನ್ ನ ಮೇಲೆ ಮಂಗಳೂರು ದಕ್ಷಿಣ, ಮಂಗಳೂರು ಗ್ರಾಮಾಂತರ, ಉಳ್ಳಾಲ ಪೊಲೀಸ್ ಠಾಣೆ, ಮೂಡುಬಿದಿರೆ ಪೊಲೀಸ್ ಠಾಣೆ, ಬರ್ಕೆ ಪೊಲೀಸ್ ಠಾಣೆ, ಕೊಣಾಜೆ ಪೊಲೀಸ್ ಠಾಣೆ, ಸುರತ್ಕಲ್ ಪೊಲೀಸ್ ಠಾಣೆ, ಕಾರ್ಕಳ ನಗರ ಪೊಲೀಸ್ ಠಾಣೆ, ಶಿರ್ವ ಪೊಲೀಸ್ ಠಾಣೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ, ಮಂಗಳೂರು ಉತ್ತರ ಪೊಲೀಸ್ ಠಾಣೆ, ಮಂಗಳೂರು ಪೂರ್ವ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ದರೋಡೆ, ಸುಲಿಗೆ, ಸರಗಳ್ಳತನ, ದೊಂಬಿ, ವಾಹನ ಕಳ್ಳತನ ಸೇರಿ ಒಟ್ಟು 25 ಪ್ರಕರಣ ದಾಖಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾದಕ ದ್ರವ್ಯ ಸೇವನೆ; ಮೂವರ ಬಂಧನ: ಮಾದಕ ದ್ರವ್ಯಗಳನ್ನು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರುತ್ತಿದ್ದ ಮೂವರನ್ನು ಬಂಟ್ವಾಳ ನಗರ ಠಾಣಾ ಎಸ್ಐ ರಾಮಕೃಷ್ಣ ನೇತೃತ್ವದ ತಂಡ ಬಂಧಿಸಿದೆ. ಪರ್ಲಿಯಾ ನಿವಾಸಿ ನವಾಝ್ ಯಾನೆ ಬೀಡಿ ನವಾಝ್, ನಂದರಬೆಟ್ಟು ನಿವಾಸಿ ಆರಿಸ್ ಯಾನೆ ಆಜಾದ್ ಮತ್ತು ಮೊಹಮ್ಮದ್ ಜಸೀಂ ಎಂಬವರು ಬಂಧಿತರು.

ಪೋಲೀಸರು ಕರ್ತವ್ಯದಲ್ಲಿರುವ ಸಂದರ್ಭದಲ್ಲಿ ಬಸ್ತಿಪಡ್ಪು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಮಾಡುತ್ತಿರುವುದು ಗಮನಿಸಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಅವರನ್ನು ವಿಚಾರಣೆ ನಡೆಸಿ ಪರೀಕ್ಷೆ ಮಾಡಿದಾಗ ಮಾದಕ ವಸ್ತುಗಳನ್ನು ಸೇವನೆ ಮಾಡಿರುವುದು ತಿಳಿದುಬಂದಿದೆ. ಆರೋಪಿಗಳ ಮೇಲೆ ಸುಮೋಟೋ ಆಕ್ಟ್‌ ನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಮಾದಕ ದ್ರವ್ಯ ಸೇವನೆ ಸಂಬಂಧ ಒಟ್ಟು ಆರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.