ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಪೊನ್ನಂಪೇಟೆ ತಾಲೂಕಿಗೆ ಆಗಮಿಸುತ್ತಿರುವ ಕನ್ನಡ ಜ್ಯೋತಿ ರಥವನ್ನು ವಿಜೃಂಭಣೆಯಿಂದ ಸ್ವಾಗತಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ, ಗೌರವಿಸಿ ಬೀಳ್ಕೊಡಬೇಕಾಗಿದೆ ಎಂದು ಪೊನ್ನಂಪೇಟೆ ತಹಸೀಲ್ದಾರ್ ಕೆ.ಎನ್. ಮೋಹನ್ ಕುಮಾರ್ ಹೇಳಿದ್ದಾರೆ.87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ಡಿ.20, 21, 22 ರಂದು ನಡೆಯಲಿದ್ದು ಸಮ್ಮೇಳನದ ಪ್ರಚಾರಕ್ಕಾಗಿ ಆಗಮಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ರಥ ಸ್ವಾಗತಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ಭುವನೇಶ್ವರಿ ದೇವಾಲಯದಿಂದ ಹೊರಟ ಕನ್ನಡ ಜ್ಯೋತಿ ಹೊತ್ತ ರಥ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಾಹಿತ್ಯ ಸಮ್ಮೇಳನದ ಕುರಿತು ಜನರಿಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ. ಆ ರಥ ನ.10 ಮತ್ತು 11ರಂದು ಕೊಡಗು ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದರು.ಸಂಪಾಜೆ ಗಡಿ ಮೂಲಕ ಜಿಲ್ಲೆ ಪ್ರವೇಶಿಸುವ ರಥವು ಮಡಿಕೇರಿ, ವಿರಾಜಪೇಟೆ ಮಾರ್ಗವಾಗಿ ಪೊನ್ನಂಪೇಟೆ ತಾಲೂಕಿಗೆ ಬರಲಿದೆ. ಗೋಣಿಕೊಪ್ಪದಲ್ಲಿ ಮತ್ತು ಪೊನ್ನಂಪೇಟೆಯಲ್ಲಿ ಅದನ್ನು ಕಲಶ ಹೊತ್ತ ಮಹಿಳೆಯರಿಂದ ಶಾಸ್ತ್ರೋಕ್ತವಾಗಿ ಸ್ವಾಗತಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕಿದೆ ಎಂದರು.
ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ಪೊನ್ನಂಪೇಟೆಗೆ ಬರುತ್ತಿರುವ ರಥವನ್ನು ಗೋಣಿಕೊಪ್ಪಲಿನ ಶ್ರೀ ಉಮಾ ಮಹೇಶ್ವರಿ ದೇವಾಲಯದ ಬಳಿ ಸ್ವಾಗತಿಸಲಾಗುವುದು. ಬಸ್ ನಿಲ್ದಾಣದಲ್ಲಿ ರಥಯಾತ್ರೆಯ ವಿಚಾರವನ್ನು ಜನರಿಗೆ ಮನದಟ್ಟು ಮಾಡುವ ಮತ್ತು ಕನ್ನಡ ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ, ಪೊನ್ನಂಪೇಟೆಯ ತಹಸೀಲ್ದಾರ್ ಕಚೇರಿಯ ಬಳಿ ರಥ ಸ್ವಾಗತಿಸಿ ಬಸ್ ನಿಲ್ದಾಣದಲ್ಲಿ ಗೀತ ಗಾಯನ ಕಾರ್ಯಕ್ರಮ ನಡೆಸಿ ಶ್ರೀರಾಮಕೃಷ್ಣ ಆಶ್ರಮದ ವರೆಗೂ ಮೆರವಣಿಗೆ ನಡೆಸಲಾಗುವುದು. ನಂತರ ಶ್ರೀ ರಾಮಕೃಷ್ಣ ಆಶ್ರಮದಲ್ಲಿಯೇ ರಥವು ವಾಸ್ತವ್ಯ ಹೂಡಲಿದ್ದು ಮಾರನೇ ದಿನ ಕುಶಾಲನಗರಕ್ಕೆ ತೆರಳಲಿದೆ ಎಂದರು.
ವಿರಾಜಪೇಟೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾ ಅಧಿಕಾರಿ ಕೊಣಿಯಂಡ ಅಪ್ಪಣ್ಣ ಮಾತನಾಡಿದರು.ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕೆ.ವಿ. ರಾಮಕೃಷ್ಣ, ನಿರ್ದೇಶಕರಾದ ಟಿ.ಆರ್ ವಿನೋದ್, ಎಸ್.ಡಿ ಗಿರೀಶ್, ಪೊನ್ನಂಪೇಟೆ ಹೋಬಳಿ ಕಂದಾಯ ಅಧಿಕಾರಿ ಸುಧೀಂದ್ರ, ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಇದ್ದರು.