ಒಡಿಶಾದಿಂದ ಪಿಲಿಕುಳಕ್ಕೆ ಸಿಂಹ, ತೋಳ, ಮೊಸಳೆ, ಅಪರೂಪದ ಪಕ್ಷಿಗಳ ಆಗಮನ

| Published : Nov 06 2024, 12:47 AM IST

ಸಾರಾಂಶ

ಪಿಲಿಕುಳ ಮೃಗಾಲಯಕ್ಕೆ ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ಆರು ವರ್ಷದ ಏಷ್ಯಾಟಿಕ್ ಗಂಡು ಸಿಂಹ, ತೋಳ, ಎರಡು ಘರಿಯಲ್ ಮೊಸಳೆ, ಅಪರೂಪದ ಪಕ್ಷಿಗಳಾದ ಎರಡು ಸಿಲ್ವರ್ ಫೆಸೆಂಟ್‌ ಎರಡು ಯೆಲ್ಲೋ ಗೋಲ್ಡನ್ ಫೆಸೆಂಟ್‌ಗಳನ್ನು ತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪಿಲಿಕುಳ ಮೃಗಾಲಯಕ್ಕೆ ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ಆರು ವರ್ಷದ ಏಷ್ಯಾಟಿಕ್ ಗಂಡು ಸಿಂಹ, ತೋಳ, ಎರಡು ಘರಿಯಲ್ ಮೊಸಳೆ, ಅಪರೂಪದ ಪಕ್ಷಿಗಳಾದ ಎರಡು ಸಿಲ್ವರ್ ಫೆಸೆಂಟ್‌ ಎರಡು ಯೆಲ್ಲೋ ಗೋಲ್ಡನ್ ಫೆಸೆಂಟ್‌ಗಳನ್ನು ತರಿಸಲಾಗಿದೆ.ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಕೇಂದ್ರ ಮೃಗಾಲಯದ ಒಪ್ಪಿಗೆ ಪಡೆದು ಪ್ರಾಣಿಗಳನ್ನು ತರಿಸಲಾಗಿದೆ. ಪಿಲಿಕುಳದಿಂದ ನಾಲ್ಕು ಕಾಡು ನಾಯಿ/ ಧೋಲ್, ಅಪರೂಪದ ನಾಲ್ಕು ರೇಟಿಕುಲೆಟೆಡ್ ಹೆಬ್ಬಾವು, ಎರಡು ಬ್ರಾಹಿಣಿ ಗಿಡುಗಗಳು, ಮೂರು ಏಶಿಯನ್‌ ಪಾಮ್ ಸಿವೇಟ, ಎರಡು ಲಾರ್ಜ್ ಇಗ್ರೇಟ್‌ಗಳನ್ನು ಒರಿಸ್ಸಾದ ನಂದನ್ ಕಾನನ್ ಮೃಗಾಲಯಕ್ಕೆ ನೀಡಲಾಗುವುದು. ಈ ವಿನಿಮಯದಲ್ಲಿ ಪಿಲಿಕುಲದಿಂದ ರವಾನೆ ಆಗುತ್ತಿರುವ ಪ್ರಾಣಿಗಳು ಪಿಲಿಕುಲ ಮೃಗಾಲಯದಲ್ಲೇ ಜನಿಸಿದವುಗಳೇ ಆಗಿವೆ.

ಪಿಲಿಕುಲದಲ್ಲಿ ಮೂರು ಸಿಂಹಗಳಿದ್ದು, ಜೊತೆಗಾರನಾಗಿ ಒಂದು ಗಂಡು ಏಷ್ಯಾಟಿಕ್ ಸಿಂಹವನ್ನು ತರಿಸಲಾಗಿದೆ. ಏಷ್ಯಾಟಿಕ್ ಗಂಡು ಸಿಂಹಗಳ ಸಂಖ್ಯೆ ಭಾರತದ ಮೃಗಾಲಯಗಳಲ್ಲಿ ಅತಿ ಕಡಿಮೆ ಇರುವುದರಿಂದ ದೂರದ ಒರಿಸ್ಸಾದಿಂದ ತರಿಸಲಾಗಿದೆ. ನಂದನ್ ಕಾನನ್ ಮೃಗಾಲಯದಿಂದ ಎರಡು ಪಶು ವೈದ್ಯಾಧಿಕಾರಿ ಮತ್ತು 8 ಪ್ರಾಣಿ ಪರಿಪಾಲಕರು ಕೂಡ ಪ್ರಾಣಿಗಳ ಆರೈಕೆ ನೋಡಿಕೊಳ್ಳಲು ಆಗಮಿಸಿದ್ದಾರೆ.

ಹೊಸದಾಗಿ ಆಗಮಿಸಿದ ಪ್ರಾಣಿ, ಉರಗ, ಪಕ್ಷಿಗಳನ್ನು ಅಗತ್ಯ ಚುಚ್ಚುಮದ್ದು ಮತ್ತು ಚಿಕಿತ್ಸೆ ನೀಡಿ ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಸುಮಾರು 15 ದಿನಗಳವರೆಗೆ ಆರೈಕೆ ಕೇಂದ್ರದಲ್ಲಿ ಇರಿಸಿ ನಂತರ ಸಾರ್ವಜನಿಕ ವೀಕ್ಷಣೆಗೆ ಲಭ್ಯ ಮಾಡಲಾಗುವುದು ಪಿಲಿಕುಲ ಅಧಿಕಾರಿಗಳು ತಿಳಿಸಿದ್ದಾರೆ.