ಸಾರಾಂಶ
ಹುಬ್ಬಳ್ಳಿಯ ಎಪಿಎಂಸಿಗೆ ಶನಿವಾರ ಪ್ರಸಕ್ತ ಹಂಗಾಮಿನಲ್ಲೇ ಅತಿ ಹೆಚ್ಚು ಮೆಣಸಿನಕಾಯಿ ಆವಕವಾಗಿದೆ. ಜತೆಗೆ ಪ್ರತಿ ಚೀಲಕ್ಕೆ ಗರಿಷ್ಠ ₹46001ಗೆ ಮಾರಾಟವಾಗಿದೆ.
ಹುಬ್ಬಳ್ಳಿ: ಹುಬ್ಬಳ್ಳಿಯ ಎಪಿಎಂಸಿಗೆ ಶನಿವಾರ ಪ್ರಸಕ್ತ ಹಂಗಾಮಿನಲ್ಲೇ ಅತಿ ಹೆಚ್ಚು ಮೆಣಸಿನಕಾಯಿ ಆವಕವಾಗಿದೆ. ಜತೆಗೆ ಪ್ರತಿ ಚೀಲಕ್ಕೆ ಗರಿಷ್ಠ ₹46001ಗೆ ಮಾರಾಟವಾಗಿದೆ.
ಏಷಿಯಾದಲ್ಲೇ ಅತಿ ದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿನ ಎಪಿಎಂಸಿಯಲ್ಲಿ ಪ್ರತಿ ಸೋಮವಾರ, ಬುಧವಾರ ಹಾಗೂ ಶನಿವಾರ ಮೆಣಸಿನಕಾಯಿ ಮಾರಾಟ ವಿಪರೀತವಾಗುತ್ತದೆ. ಅದರಲ್ಲೂ ಶನಿವಾರ ಹೆಚ್ಚು ಆವಕವಾಗುವುದು ವಾಡಿಕೆ. ಧಾರವಾಡ ಜಿಲ್ಲೆಯ ಎಲ್ಲ ತಾಲೂಕು, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮೆಣಸಿನಕಾಯಿ ಬೆಳೆಗಾರರು ಬೆಳೆ ತರುತ್ತಾರೆ.ಕಳೆದ ಶನಿವಾರ ಅಂದರೆ ಜ.18ರಂದು 38192 ಚೀಲಗಳ ಆವಕವಾಗಿತ್ತು. ಅಂದು ಕನಿಷ್ಠ 1 ಸಾವಿರ ಹಾಗೂ ಗರಿಷ್ಠ ₹45200ಗೆ ಪ್ರತಿ ಚೀಲಕ್ಕೆ ಮಾರಾಟವಾಗಿತ್ತು. ಆದರೆ ಶನಿವಾರ (ಜ.25) 40642 ಚೀಲ ಆವಕವಾಗಿದೆ. ಕನಿಷ್ಠ ₹1500, ಗರಿಷ್ಠ ₹46001ಗೆ ಮಾರಾಟವಾಗಿದೆ. ಒಟ್ಟಾರೆ ಸರಿಸುಮಾರ 16325 ಕ್ವಿಂಟಲ್ ಆವಕವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಎಪಿಎಂಸಿ ಆಡಳಿತ ಮಂಡಳಿಯು ಯಾವುದೇ ಗೊಂದಲವಿಲ್ಲದಂತೆ ಮೆಣಸಿನಕಾಯಿ ಮಾರಾಟಕ್ಕೆ ವ್ಯವಸ್ಥೆ ಮಾಡಿತ್ತು. ಮೆಣಸಿನಕಾಯಿ ಬೆಲೆಯಿಂದ ರೈತರು ಖುಷಿಯಾಗಿದ್ದಾರೆ.