- ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಬೀದಿಬದಿ ವ್ಯಾಪಾರಿಗಳ ಸಂಘದಿಂದ ಪ್ರತಿಭಟನೆ । ಎಸಿಗೆ ಮನವಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಅವರ ಮಿತಿಮೀರಿದ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬೀದಿಬದಿ ವ್ಯಾಪಾರಿಗಳ ಸಂಘದ ವತಿಯಿಂದ ಮಂಗಳವಾರ ಪಟ್ಟಣದ ಟಿ.ಬಿ. ವೃತ್ತದಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ, ರಾಜ್ಯಪಾಲರಿಗೆ ಸ್ಥಳೀಯ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಮೂಲಕ ಮನವಿ ಸಲ್ಲಿಸಲಾಯಿತು.

ಡಿ.ಎಸ್.ಎಸ್. ಮುಖಂಡ ದಿಡಗೂರು ಜಿ,ಎಚ್. ತಮ್ಮಣ್ಣ ಮಾತನಾಡಿ, ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಅವರು ಬೀದಿಬದಿ ವ್ಯಾಪಾರಿಗಳನ್ನು ಅನಗತ್ಯವಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.


ಪಟ್ಟಣದ ಡಿಗ್ರಿ ಕಾಲೇಜು ಮುಂಭಾಗದ ಪೆಟ್ಟಿಗೆ ಅಂಗಡಿ ಶನಿವಾರ ತೆರವುಗೊಳಿಸಲು ಮುಂದಾದ ವೇಳೆ ಅಂಗಡಿಗೆ ಹಾಕಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿರುವ ಬ್ಯಾನರ್ ಅನ್ನು ಜೆಸಿಬಿ ಮೂಲಕ ದೌರ್ಜನ್ಯದಿಂದ ಕೀಳಿಸಿ ಕಸದ ಬುಟ್ಟಿಗೆ ಹಾಕುವ ಮೂಲ ಅಗೌರವದಿಂದ ವರ್ತಿಸಿದ್ದಾರೆ. ಇದರ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆ ಎದುರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದ ಆವರಣಕ್ಕೆ ಚರಂಡಿ ಕೊಳಚೆ ನೀರನ್ನು ಹರಿಯುವಂತೆ ಮಾಡಿ ದೌರ್ಜನ್ಯದಿಂದ ವರ್ತಿಸುವ ಮೂಲಕ ಅಪಮಾನ ಮಾಡಿದ್ದಾರೆ. ಪಟ್ಟಣದಲ್ಲಿ ನೂರಾರು ಬೀದಿಬದಿ ವ್ಯಾಪಾರಿಗಳು ಕಷ್ಟಪಟ್ಟು ಸೊಪ್ಪು, ಹಣ್ಣು, ಹೂವು, ತರಕಾರಿ ವ್ಯಾಪಾರಿ ಮಾಡುತ್ತ ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಇವರು ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಇಂತಹ ಅಮಾಯಕರ ಮೇಲೆ ಈ ಅಧಿಕಾರಿ ಮಹಿಳೆಯರಿಗೆ ಏಕವಚನದಿಂದ ನಿಂದಿಸುವುದು ಬೀದಿಬದಿ ವ್ಯಾಪಾರಿಗಳ ವಸ್ತುಗಳನ್ನು ಕಾಲಿನಿಂದ ಒದ್ದು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮಿತಿಮೀರಿದ ದೌರ್ಜನ್ಯದಿಂದ ವರ್ತಿಸುತ್ತಿದ್ದು, ಕೂಡಲೇ ಇಂತಹ ದರ್ಪದ ಅಧಿಕಾರಿಯನ್ನ ಅಮಾನತು ಮಾಡಬೇಕು ಎಂದು ಅಗ್ರಹಿಸಿದರು.

ಈ ಸಂದರ್ಭ ದಲಿತ ಮುಖಂಡರಾದ ಮಾರಿಕೊಪ್ಪದ ಮಂಜಪ್ಪ, ಪ್ರಭಾಕರ, ಕುರುವ ಮಂಜಪ್ಪ ಎ.ಎಚ್. ಹಳದಪ್ಪ, ತ್ಯಾಗದಕಟ್ಟೆ ಹನುಮಂತಪ್ಪ, ಕರವೇ ಮಂಜು, ಪ್ರಭಾಕರ, ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ರೇಣುಕಮ್ಮ ಮುಂತಾದವರು ಮಾತನಾಡಿದರು.

ಕರವೇ ಹರೀಶ್, ಹಳದಪ್ಪ ಪಿರಗಿ, ಡಿ.ಎಸ್.ಎಸ್.ನ ಕುಂದೂರು ಶಾಂತರಾಜ್, ಚನ್ನಗಿರಿ ಅಣ್ಣಪ್ಪ,ಕೆ.ಡಿ.ಹನುಮಂತಪ್ಪ, ನರಸಿಂಹಪ್ಪ, ಹನುಮಂತಪ್ಪ, ನರಸಿಂಹಪ್ಪ, ದುರ್ಗೇಶ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ನಾಗರಾಜ್, ನೂರಾರು ಮುಖಂಡರು ಇದ್ದರು.

ಮನವಿ ಹಾಗೂ ವಿವಿಧ ಹಕ್ಕೂತ್ತಾಯದ ಪತ್ರವನ್ನು ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ‍ಅವರಿಗೆ ದಲಿತ ಮುಖಂಡರು ಸಲ್ಲಿಸಿದರು. ಸಿಪಿಏ ಸುನಿಲ್ ಕುಮಾರ್, ಪೊಲೀಸ್ ಅಧಿಕಾರಿಗಳು ಕೂಡ ಇದ್ದರು.

- - -

(ಬಾಕ್ಸ್‌) * ರಸ್ತೆ ಅಗಲೀಕರಣ ಸಂಪೂರ್ಣ ಅವೈಜ್ಞಾನಿಕ: ಎ.ಡಿ.ಈಶ್ವರಪ್ಪ ಅಸಮಾಧಾನ ದಲಿತ ಮುಖಂಡ ಎ.ಡಿ.ಈಶ್ವರಪ್ಪ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳದ ವ್ಯವಸ್ಥೆ ಮಾಡಿಕೊಡದೇ ಹೊಟ್ಟೆಪಾಡಿಗಾಗಿ ರಸ್ತೆ ಬದಿಗಳಲ್ಲಿ ವ್ಯಾಪಾರದ ಬದುಕು ಮಾಡುವ ಅಮಾಯಕರ ಮೇಲೆ ಪುರಸಭೆ ಮುಖ್ಯಾಧಿಕಾರಿ ಇನ್ನಿಲ್ಲದ ದೌರ್ಜನ್ಯ ಅಮಾನವೀಯ. ತಾಲೂಕು ಕಚೇರಿ ಮುಂಭಾಗದಲ್ಲಿ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಅವರ 10 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಬೇಕು. ಇದರ ಜೊತೆಗೆ ಬೇರೆ ಯಾವುದೇ ಪ್ರತಿಮೆಗೆ ಅವಕಾಶ ನೀಡಬಾರದು ಅಂಬೇಡ್ಕರ್ ಪ್ರತಿಮೆಯನ್ನು ಮಾತ್ರ ಪ್ರತಿಷ್ಠಾಪಿಸಬೇಕು ಎಂದು ಈ ವೇಳೆ ಒತ್ತಾಯಿಸಿದರು. ಹೊನ್ನಾಳಿ ಟೌನ್‌ನಲ್ಲಿ ಟಿ.ಎಂ. ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್‌ವರೆಗೆ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ. ನಿಖರ ಅಳತೆ ಪ್ರಕಾರವೇ ರಸ್ತೆ ಅಗಲೀಕರಣ ಮಾಡಬೇಕು. ಆದರೆ, ಅಧಿಕಾರಿಗಳು ಈ ವಿಷಯದಲ್ಲಿ ಸಾಕಷ್ಟು ತಾರತಮ್ಯ ಎಸಗಿದ್ದಾರೆ. ಕಳಪೆ ಕಾಮಗಾರಿ ಬಗ್ಗೆ ಉನ್ನತಮಟ್ಟದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

- - -

-21ಎಚ್.ಎಲ್.ಐ1:

ಹೊನ್ನಾಳಿ ಪುರಸಭೆ ಮುಖ್ಯಾಧಿಕಾರಿ ಬೀದಿ ಬದಿ ವ್ಯಾಪಾರಿಗಳ ಮೇಲಿನ ದೌರ್ಜನ್ಯ ವರ್ತನೆ ಖಂಡಿಸಿ ಡಿಎಸ್‌ಎಸ್‌, ಕರವೇ ಹಾಗೂ ಬೀದಿಬದಿ ವ್ಯಾಪಾರಿಗಳ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.