ಆಧುನಿಕ ಯುಗದಲ್ಲಿ ಜನರು ಮೊಬೈಲ್ ಮತ್ತು ಟಿವಿ ಬಳಕೆಯಲ್ಲಿ ತೊಡಗಿಸಿಕೊಂಡು ಸಂಸ್ಕೃತಿ ಮರೆತುಬಿಟ್ಟಿದ್ದಾರೆ

ಕುಕನೂರು: ನೆಲದ ಕಲೆ ಮತ್ತು ಸಂಸ್ಕೃತಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಈ ಸಂಗೀತದಲ್ಲಿ ಜೀವನದ ಆನಂದ ಅಡಗಿದೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಹೇಳಿದರು.

ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ನಾದಯೋಗಿ ಪುಟ್ಟರಾಜ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಮತ್ತು ಬೆಂಗಳೂರು ಸಹಯೋಗದಲ್ಲಿ ಗುರುವಾರ ಸಂಜೆ ಜರುಗಿದ ನಾದಯೋಗಿ ಪರಂಪರಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲೆ ಮತ್ತು ಸಂಸ್ಕೃತಿ ಉಳಿಸುವಲ್ಲಿ ಇಲಾಖೆ ಮಹತ್ವದ ಪಾತ್ರ ವಹಿಸುತ್ತಿದೆ. ಆಧುನಿಕ ಯುಗದಲ್ಲಿ ಜನರು ಮೊಬೈಲ್ ಮತ್ತು ಟಿವಿ ಬಳಕೆಯಲ್ಲಿ ತೊಡಗಿಸಿಕೊಂಡು ಸಂಸ್ಕೃತಿ ಮರೆತುಬಿಟ್ಟಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಪಾಲಕರು ಮಕ್ಕಳಿಗೆ ಸಂಸ್ಕೃತಿಯ ಮೌಲ್ಯ ಬೋಧಿಸುವ ಬದಲು ಮೊಬೈಲ್‌ ಬಳಕೆಗೆ ಉತ್ತೇಜನ ನೀಡುತ್ತಿರುವುದು ಕಳವಳಕಾರಿ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ವೇದಮೂರ್ತಿ ಮಹೇಶ್ವರ ತಾತ ವಹಿಸಿದ್ದು, ಅಧ್ಯಕ್ಷತೆಯನ್ನು ಮಹಮ್ಮದಸಾಬ್‌ ವಾಲಿಕಾರ ವಹಿಸಿದರು. ಮುಖ್ಯ ಅತಿಥಿಗಳಾಗಿ ಶಂಕರ ಬಿನ್ನಾಳ, ಕಳಕಪ್ಪ ಚಟ್ಟಿ, ಹಿರಿಯಪ್ಪ ಕಡೆಮನಿ,ಶೇಖಪ್ಪ ದೊಡ್ಡಮನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಆದರ್ಶ ಬಗಾಡೆಯವರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಿಂದ ಆರಂಭಗೊಂಡಿತು. ಬಳಿಕ ಮೆಹಬೂಬ ಕಿಲ್ಲೆದಾರರಿಂದ ಜನಪದ ಸಂಗೀತ, ಅಲ್ಲಾಭಕ್ಷಿ ಭೀಮನೂರ ಹಾಗೂ ವಿಜಯಲಕ್ಷ್ಮಿ ನಾಗರಾಜರಿಂದ ಸುಗಮ ಸಂಗೀತ, ಅಂಬರೀಶ್ ಹಾಗೂ ತಂಡದವರಿಂದ ತಬಲಾ ಸೋಲೋ, ಅಂಬಣ್ಣ ದಳವಾಯಿಯವರಿಂದ ತತ್ವಪದ, ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಹಾಗೂ ದೀಕ್ಷಾ ಹೆಗಡೆ ತಂಡದವರಿಂದ ಭರತನಾಟ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ಮೆಚ್ಚಿಸಿತು.

ವಾದ್ಯ ವೃಂದದಲ್ಲಿ ಕೀಬೋರ್ಡ್‌ನಲ್ಲಿ ರಾಮಚಂದ್ರಪ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ ಹಾಗೂ ಕುಮಾರೇಶ ಬಿನ್ನಾಳ, ರಿಧಮ್ ಪ್ಯಾಡ್‌ನಲ್ಲಿ ಸಂಜನ ಬೆಲ್ಲದ ಸಹಕರಿಸಿದರು.