ಇಂದು ಕಲಾವಿಮರ್ಶೆ ಕಲಿಸುವ ಅಗತ್ಯವಿದೆ: ರಮೇಶ್ ರಾವ್

| Published : Apr 08 2024, 01:07 AM IST

ಸಾರಾಂಶ

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್ (ಜಿಸಿಪಿಎಎಸ್) ಆಶ್ರಯದಲ್ಲಿ, ‘ಚಿತ್ರ ಕಲೋಸ್’ ಎಂಬ ಒಂದು ದಿನದ ಚಿತ್ರಕಲಾ ಕಾರ್ಯಾಗಾರವನ್ನು ಹಿರಿಯ ಕಲಾವಿದ, ಉಡುಪಿ ಫೋರಂನ ಅಧ್ಯಕ್ಷ ರಮೇಶ್ ರಾವ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ, ಮಣಿಪಾಲ

ಇವತ್ತಿನ ಸಂದರ್ಭದಲ್ಲಿ ಕಲಾ ವಿಮರ್ಶೆಯನ್ನು ಕಲಿಸುವ ಅಗತ್ಯವಿದೆ ಎಂದು ಹಿರಿಯ ಕಲಾವಿದ, ಉಡುಪಿ ಫೋರಂನ ಅಧ್ಯಕ್ಷ ರಮೇಶ್ ರಾವ್ ನುಡಿದರು.

ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್ (ಜಿಸಿಪಿಎಎಸ್) ಆಶ್ರಯದಲ್ಲಿ ನಡೆದ ‘ಚಿತ್ರ ಕಲೋಸ್’ ಎಂಬ ಒಂದು ದಿನದ ಚಿತ್ರಕಲಾ ಕಾರ್ಯಾಗಾರವನ್ನು ಚಾರ್ಕೋಲ್ ಸ್ಕೆಚ್ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಉತ್ತಮ ಕಲೆಗೂ ಜನಪ್ರಿಯ ಕಲೆಗೂ ವ್ಯತ್ಯಾಸವಿದೆ ಎಂದ ಅವರು ಉತ್ತಮ ಕಲೆ ಜನಪ್ರಿಯವಾಗದೇ ಇದರಬಹುದು, ಹಾಗೆಯೇ ಜನಪ್ರಿಯ ಕಲೆ ಉತ್ತಮವಾಗಿಲ್ಲದಿರುವ ಸಾಧ್ಯತೆಗಳಿವೆ. ಕಲೆಯನ್ನು ವಿಮರ್ಶಾತ್ಮಕ ದೃಷಿಕೋನದಿಂದ ನೋಡುವುದನ್ನು ಪ್ರತಿಯೊಬ್ಬರೂ ಕಲಿಯಬೇಕು. ಇಂತಹ ಬೋಧನೆಯ ಅವಶ್ಯಕತೆ ಖಂಡಿತ ಇದೆ ಎಂದು ಅಭಿಪ್ರಾಯಪಟ್ಟರು.

ಸಂಗೀತವು ರಾಗ, ತಾಳ ಮತ್ತು ಲಯವನ್ನು ಹೊಂದಿರುವಂತೆ ದೃಶ್ಯ ಕಲೆಯು ರೇಖೆ, ರೂಪ ಮತ್ತು ಬಣ್ಣಗಳನ್ನು ಹೊಂದಿದೆ. ಕಲಾವಿದನಾಗುವುದು ಬಹು ಕಷ್ಟದ ಕೆಲಸ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಮಾತ್ರ ಕಲಾವಿದರಾಗಬಹುದು ಎಂದು ರಮೇಶ್ ರಾವ್ ಹೇಳಿದರು.

ಕಾರ್ಯಾಗಾರವನ್ನು ನಡೆಸಿಕೊಟ್ಟ ಕಲಾ ಪತ್ರಕರ್ತ ಪ್ರೊ.ನೇಮಿರಾಜ್ ಶೆಟ್ಟಿ ಅವರು ಲಿಯೊನಾರ್ಡೊ ವಿನ್ಸಿ, ವರ್ಮೀರ್, ಪಿಕಾಸೊ, ವ್ಯಾನ್ ಗಾಗ್, ಪಾಲ್ ಕ್ಲೀ, ಹೆನ್ರಿ ರೂಸೋ, ರವೀಂದ್ರನಾಥ ಟ್ಯಾಗೋರ್ ಮುಂತಾದ ಕಲಾವಿದರ ಹಲವಾರು ವರ್ಣಚಿತ್ರಗಳನ್ನು ವಿವರಿಸಿದರು. ಉತ್ತಮ ಚಿತ್ರವು ಹೊಸತನದಿಂದ ಕೂಡಿದ್ದು, ಸ್ಥೂಲ ಕಲ್ಪನೆಗಳನ್ನು ಮತ್ತು ಸೂಕ್ಷ್ಮ ವರ್ಣ ವಿನ್ಯಾಸವನ್ನು ಹೊಂದಿರುತ್ತದೆ ಎಂದರು.

ಕಲಾವಿದ ಡಾ.ಜನಾರ್ದನ್ ಹಾವಂಜೆ ಮಾತನಾಡಿ, ಕಲೆಯು ಮನಸ್ಸಿನಲ್ಲಿ ಹುಟ್ಟುತ್ತದೆ ಮತ್ತು ಸೃಜನಶೀಲವಾಗಿ ಕ್ಯಾನ್ವಾಸ್‌ನಲ್ಲಿ ಪ್ರಕಟವಾಗುತ್ತದೆ ಎಂದರು. ಅವರು ಮ್ಯಾಗಜೀನ್ ಪೇಪರ್‌ಗಳನ್ನು ಬಳಸಿಕೊಂಡು ಅರ್ಥಪೂರ್ಣವಾದ ಕೊಲಾಜ್ ಅನ್ನು ಹೇಗೆ ರಚಿಸಬಹುದು ಎಂಬುದನ್ನು ಪ್ರದರ್ಶಿಸಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಸಮಗ್ರ ದೃಷ್ಟಿಕೋನವನ್ನು ಹೊಂದಲು ಪೂರ್ವ ಮತ್ತು ಪಾಶ್ಚಿಮಾತ್ಯ ಕಲಾ ಸಂಪ್ರದಾಯಗಳನ್ನು ತಿಳಿದುಕೊಳ್ಳಬೇಕು ಎಂದರು.

ಅಪರ್ಣಾ ಪರಮೇಶ್ವರನ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಮಣಿಪಾಲ ಮತ್ತು ಸುತ್ತಮುತ್ತಲಿನ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.