ಸಾರಾಂಶ
ಮನಸ್ಸು ಬುದ್ಧಿಗೆ ಸಂಸ್ಕಾರವನ್ನು ನೀಡುವ ಅವುಗಳ ಮೌಲ್ಯವು ಅಪರಿಮಿತವಾದುದು. ಅವುಗಳನ್ನು ಬಿಟ್ಟು ಸ್ವೇಚ್ಛಾಚಾರಿಗಳಾದರೆ ನಮ್ಮ ಅಸ್ತಿತ್ವಕ್ಕೆ ಸಂಚಕಾರ ಬರುತ್ತದೆ.
ಸಿದ್ದಾಪುರ: ಕಲೆ ಮತ್ತು ಸಂಸ್ಕೃತಿಗಳು ನಮ್ಮ ಬದುಕಿನ ಜೀವಾಳ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ಮೂಲ ಬೇರನ್ನು ಬಿಟ್ಟು ಇರುವುದಕ್ಕೆ ಆಗುವುದಿಲ್ಲ ಎಂದು ಬಿದ್ರಕಾನ ಸ.ಹಿ. ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಎಂ.ಆರ್. ಭಟ್ಟ ತಿಳಿಸಿದರು.ತಾಲೂಕಿನ ಸಾಂಸ್ಕೃತಿಕ ಸಂಸ್ಥೆಯಾದ ಕಲಾಭಾಸ್ಕರ ಇಟಗಿಯವರು ಬಿದ್ರಕಾನಿನ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಹಮ್ಮಿಕೊಂಡ ಕೇಂದ್ರ ಸಂಸ್ಕೃತಿ ಇಲಾಖೆ, ಭಾರತ ಸರ್ಕಾರದ ಪ್ರಾಯೋಜನೆಯ ಹೊಸ ಯಕ್ಷಕೃತಿ ಹನುಮದ್ವಿಲಾಸ ದ ಪ್ರಥಮ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಮನಸ್ಸು ಬುದ್ಧಿಗೆ ಸಂಸ್ಕಾರವನ್ನು ನೀಡುವ ಅವುಗಳ ಮೌಲ್ಯವು ಅಪರಿಮಿತವಾದುದು. ಅವುಗಳನ್ನು ಬಿಟ್ಟು ಸ್ವೇಚ್ಛಾಚಾರಿಗಳಾದರೆ ನಮ್ಮ ಅಸ್ತಿತ್ವಕ್ಕೆ ಸಂಚಕಾರ ಬರುತ್ತದೆ ಎಂದರು.
ಬಿದ್ರಕಾನು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ ಭಟ್ಟ ಬಿದ್ರಕಾನು, ಕಲಾಪೋಷಕ ಹನುಮಂತ ಗೌಡ ಕೊಡಗಿಬೈಲು, ಎಸ್.ಎಂ. ಹೆಗಡೆ ಮುಂಡೂಸರ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ವಿನಾಯಕ ಹೆಗಡೆ ಸ್ವಾಗತಿಸಿದರು. ನಂತರ ಕವಿ ಪಾರ್ತಿಸುಬ್ಬ ವಿರಚಿತ ಲಂಕಾದಹನ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತಿಕೆ ಸರ್ವೇಶ್ವರ ಹೆಗಡೆ ಮೂರೂರು, ಮದ್ದಳೆ ಶರತ್ ಹೆಗಡೆ ಜಾನಕೈ ಹಾಗೂ ಚಂಡೆ ಸಂಪ ಲಕ್ಷ್ಮಿನಾರಾಯಣ, ಮುಮ್ಮೇಳದಲ್ಲಿ ಹನುಮಂತನಾಗಿ ವಿನಯ ಸುಬ್ಯಾಯ ಭಟ್ಟ ಬೆರೊಳ್ಳಿ, ರಾವಣನಾಗಿ ನೀಲ್ಕೋಡು ಶಂಕರ ಹೆಗಡೆ, ಶ್ರೀರಾಮ ಹಾಗೂ ಸೀತೆಯಾಗಿ ಇಟಗಿ ಮಹಾಬಲೇಶ್ವರ ಭಟ್ಟ, ಜಾಂಬವಂತ ಹಾಗೂ ದೂತನಾಗಿ ನಾಗೇಂದ್ರ ಭಟ್ಟ ಮೂರೂರು, ಸರಮೆಯಾಗಿ ನಾಗಪತಿ ಹೆಗಡೆ ಕೊಪ್ಪ, ಲಂಕಿಣಿಯಾಗಿ ವೆಂಕಟೇಶ ಹೆಗಡೆ ಬೊಗರಿಮಕ್ಕಿ, ಸುಗ್ರೀವನಾಗಿ ನಿತಿನ್ ದಂಟಕಲ್, ಇಂದ್ರಜಿತುವಾಗಿ ಅಭಯ ಹೆಗಡೆ ಹೊಸಗದ್ದೆ ಮುಂತಾದವರು ಪಾಲ್ಗೊಂಡಿದ್ದರು.