ವಿಕೆ ಇಂಟರ್‌ ನ್ಯಾಷನಲ್‌ನಲ್ಲಿ ಕಲಾ ವಸ್ತು ಪ್ರದರ್ಶನ

| Published : Nov 19 2023, 01:30 AM IST

ವಿಕೆ ಇಂಟರ್‌ ನ್ಯಾಷನಲ್‌ನಲ್ಲಿ ಕಲಾ ವಸ್ತು ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

800ಕ್ಕೂ ಹೆಚ್ಚು ಮಕ್ಕಳು ತಯಾರಿಸಿದ ಮಾದರಿಗಳು, ಪ್ರದರ್ಶನದಲ್ಲಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಿದ ಗಣ್ಯರು

ಬೀದರ್: ನಗರದ ವಿ.ಕೆ. ಇಂಟರ್‌ನ್ಯಾಷನಲ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ವಿಜ್ಞಾನ ಹಾಗೂ ಕಲಾ ವಸ್ತು ಪ್ರದರ್ಶನದಲ್ಲಿ ಮಕ್ಕಳು ಸಿದ್ಧಪಡಿಸಿದ ವಿವಿಧ ಮಾದರಿಗಳು ಗಮನ ಸೆಳೆಯುತ್ತಿವೆ.

ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿ, ಸಾಮಾನ್ಯ ಜ್ಞಾನ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಕ್ಕಳೇ ಖುದ್ದು ತಯಾರಿಸಿದ 800ಕ್ಕೂ ಹೆಚ್ಚು ಮಾದರಿಗಳು ಪ್ರದರ್ಶನದಲ್ಲಿವೆ.

ಕೂಡಲಸಂಗಮದ ಬಸವಣ್ಣನವರ ಐಕ್ಯ ಸ್ಥಳ, ವಿಶ್ವದ ಮೊದಲ ಸಂಸತ್ ಎಂದೇ ಕರೆಯಲಾಗುವ ಬಸವಕಲ್ಯಾಣದ ಅನುಭವ ಮಂಟಪ, ಬೀದರ್‌ನ ಐತಿಹಾಸಿಕ ಕೋಟೆ, ನರಸಿಂಹ ಝರಣಿ, ಗುರುದ್ವಾರ, ಚೌಬಾರಾ ಮಾದರಿಗಳು ಗಮನ ಸೆಳೆಯುವಂತಿದ್ದವು.

ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು, ಜಲ- ವಾಯುವಿನಿಂದ ವಿದ್ಯುತ್ ಉತ್ಪಾದನೆ, ಸೌರಶಕ್ತಿ, ಗಣಕಯಂತ್ರ ಮಾದರಿಗಳು ಚಿಂತನೆಗೆ ಹಚ್ಚುತ್ತಿವೆ. ಪರ್ವತ, ಅರಣ್ಯ, ಕೃಷಿ, ತೋಟಗಾರಿಕೆ, ಹನಿ ನೀರಾವರಿ, ಹಳ್ಳಿ ಮನೆಗಳು, ಕಟ್ಟುವ, ಬೀಸುವ ಕಲ್ಲುಗಳು, ಒನಕೆ, ಫಲ, ಪುಷ್ಪ, ತರಕಾರಿ, ಚಿತ್ರಕಲೆ, ಸಿರಿಧಾನ್ಯ, ಸಂಚಾರ ನಿಯಮ, ಹೆಲ್ಮೇಟ್ ಜಾಗೃತಿ ಸೇರಿದಂತೆ ಇನ್ನೂ ಹಲವು ಮಾದರಿಗಳು ಪ್ರದರ್ಶನದ ಭಾಗವಾಗಿವೆ.

ಮಾದರಿಗಳನ್ನು ಸಿದ್ಧಪಡಿಸಿರುವ ನರ್ಸರಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಮೊದಲ ದಿನ ಅಳ್ಳು ಹುರಿದಂತೆ ಅವುಗಳ ವಿವರಣೆ ನೀಡಿ, ಸಹಪಾಠಿಗಳು ಹಾಗೂ ಪಾಲಕರ ಮೆಚ್ಚುಗೆಗೆ ಪಾತ್ರರಾದರು.

ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಿ:

ಪಾಲಕರು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದು ಪ್ರದರ್ಶನಕ್ಕೆ ಚಾಲನೆ ನೀಡಿದ ಡಾ. ನಿತಿನ್ ಗುದಗೆ ಸಲಹೆ ಮಾಡಿದರು. ಮಕ್ಕಳ ಮೇಲೆ ಯಾವ ಕಾರಣಕ್ಕೂ ಒತ್ತಡ ಹೇರಬಾರದು. ಅವರ ಆತ್ಮವಿಶ್ವಾಸ ಇಮ್ಮಡಿಗೊಳಿಸಬೇಕು ಎಂದು ತಿಳಿಸಿದರು.

ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳೂ ಅವಶ್ಯಕವಾಗಿವೆ ಎಂದು ಸಾಯಿಜ್ಞಾನ ಪಬ್ಲಿಕ್ ಶಾಲೆಯ ಅಧ್ಯಕ್ಷ ರಮೇಶ ಕುಲಕರ್ಣಿ ಹೇಳಿದರು.

ಬಸವ ತತ್ವ ಶಿಕ್ಷಣ ಸಂಸ್ಥೆಯು ಅತ್ಯಂತ ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವೈಜಿನಾಥ ಕಮಠಾಣೆ ಹೇಳಿದರು.

ಮಕ್ಕಳ ಸಾಮಾನ್ಯ ಜ್ಞಾನ ಹೆಚ್ಚಿಸಲು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.

ವಿ.ಕೆ. ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಕಾರ್ಯದರ್ಶಿ ಡಾ. ದಿಲೀಪ್ ಕಮಠಾಣೆ, ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜಿನ ಲೋಕೇಶ ಉಡಬಾಳೆ, ವಿ.ಕೆ. ಇಂಟರ್‌ನ್ಯಾಷನಲ್ ಆಡಳಿತಾಧಿಕಾರಿ ಜಿನ್ಸ್ ಕೆ. ಥಾಮಸ್, ಪ್ರಾಚಾರ್ಯೆ ರೊಸ್ನಿ ಕೆ. ಥಾಮಸ್, ಮುಖ್ಯಶಿಕ್ಷಕ ರವೀಂದ್ರ ದೇವಾ, ಸಂಸ್ಥೆಯ ಧನರಾಜ ಪಾಟೀಲ, ನಾಗೇಶ ಬಿರಾದಾರ, ಝರಣಪ್ಪ ಹೊಸಳ್ಳಿ ಮತ್ತಿತರರು ಇದ್ದರು. ಪ್ರದರ್ಶನ ಭಾನುವಾರವೂ ಇರಲಿದೆ.