ಸಾರಾಂಶ
ರಾಜ್ಯದ ಗಮನ ಸೆಳೆದಿರುವ ಕಾಲೇಜಿನ ಕಲೋತ್ಸವ ಕಾರ್ಯಕ್ರಮಕ್ಕೆ ವಿವಿಧ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಈ ಕಲೋತ್ಸವದಲ್ಲಿ ಸಿನಿಮಾ ತಾರೆಯರು, ಗಾಯಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ವ್ಯಕ್ತಿಗಳನ್ನು ಆಹ್ವಾನಿಸಿದ್ದು, ಕಾರ್ಯಕ್ರಮವನ್ನು ವರ್ಣರಂಜಿತವಾಗಿ ಆಚರಣೆ ಮಾಡುವುದು ಮುಖ್ಯ ಉದ್ದೇಶವಾಗಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪಠ್ಯದ ಜೊತೆಗೆ ಸಾಂಸ್ಕೃತಿಕ ಕಲೆಗಳ ಆಸ್ವಾದಕ್ಕೆ ಅವಕಾಶಗಳನ್ನು ಕಲ್ಪಿಸಿರುವ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವನ್ನು ನೀಡಲು ಈ ವರ್ಷ 25ನೇ ವರ್ಷದ ಕಲೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ.ನಗರದ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಕಲೋತ್ಸವಕ್ಕೆ 25 ವರ್ಷಗಳು ಸಂದಿದ್ದು, ಈ ಹಿನ್ನೆಲೆಯಲ್ಲಿ ಹಸಿರು ಕ್ಯಾಂಪಸ್ ಆವರಣದಲ್ಲಿ ಶುಕ್ರವಾರ ಕಲೋತ್ಸವ- 2025ರ ಟೀಸರ್ ಬಿಡುಗಡೆಗೊಳಿಸಲಾಯಿತು.
ಪ್ರಾಂಶುಪಾಲ ಡಾ. ಎಂ.ಎಸ್. ರವಿಪ್ರಕಾಶ್ ರವರು ಟೀಸರ್ ಬಿಡುಗಡೆಗೊಳಿಸುವ ಮೂಲಕ 2025ನೇ ಸಾಲಿನ ಕಲೋತ್ಸವಕ್ಕೆ ಚಾಲನೆ ನೀಡಿದರು. ದೇಶ ವಿದೇಶದ ಮಟ್ಟದಲ್ಲಿ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದು, ಶೈಕ್ಷಣಿಕ ಪ್ರಗತಿಯ ಜೊತೆಗೆ ಮನೋರಂಜನೆಗಾಗಿ ಪ್ರತಿವರ್ಷ ವಿವಿಧ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು, ಇದರಲ್ಲಿ ಕಲೋತ್ಸವ ಮುಖ್ಯವಾಗಿದೆ. ಕಲೋತ್ಸವ ಕಾರ್ಯಕ್ರಮಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ ಎಂದರು.ರಾಜ್ಯದ ಗಮನ ಸೆಳೆದಿರುವ ಕಾಲೇಜಿನ ಕಲೋತ್ಸವ ಕಾರ್ಯಕ್ರಮಕ್ಕೆ ವಿವಿಧ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಈ ಕಲೋತ್ಸವದಲ್ಲಿ ಸಿನಿಮಾ ತಾರೆಯರು, ಗಾಯಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ವ್ಯಕ್ತಿಗಳನ್ನು ಆಹ್ವಾನಿಸಿದ್ದು, ಕಾರ್ಯಕ್ರಮವನ್ನು ವರ್ಣರಂಜಿತವಾಗಿ ಆಚರಣೆ ಮಾಡುವುದು ಮುಖ್ಯ ಉದ್ದೇಶವಾಗಿದೆ. ಈ ಬಾರಿಯ ಮನೋರಂಜನಾತ್ಮಕ ಕಾರ್ಯಕ್ರಮಕ್ಕಾಗಿ ಎರಡು ಲಕ್ಷ. ರು.ಗಳ ನಗದು ಬಹುಮಾನವನ್ನು ಘೋಷಣೆ ಮಾಡಿದ್ದು ವಿದ್ಯಾರ್ಥಿಗಳು ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಮನೋರಂಜನೆಯಲ್ಲಿ ಮಿಂದೆದ್ದು ಬಹುಮಾನವನ್ನು ಗೆಲ್ಲಬಹುದಾಗಿದೆ ಎಂದು ಸ್ಪರ್ಧೆಗಳ ಆಯೋಜಕರು ತಿಳಿಸಿದ್ದಾರೆ.
ಡೀನ್ ಡಾ.ರೇಣುಕಾ ಲತಾ, ಕಲೋತ್ಸವ-೨೫ರ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರಾದ ಡಾ.ಎಂ.ಚಂದ್ರಶೇಖರ್, ಪ್ರಾಧ್ಯಾಪಕರಾದ ಎನ್‌ಸಿಸಿ ಅಧಿಕಾರಿ ಡಾ. ಜಯಪ್ರಕಾಶ್, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ರವಿಕಿರಣ, ಕಲೋತ್ಸವ-೨೫ ಸಮಿತಿ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾಂಕೇತಿಕ ಹಾಡು, ನೃತ್ಯ ಮತ್ತು ಕಲಾಪ್ರದರ್ಶನಗಳು ನಡೆದವು.