ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ದೇಶೀಯ ಕಲಾ ಪ್ರಕಾರಗಳು ಅನಾವರಣಗೊಳ್ಳುವ ವೇದಿಕೆಯಾಗಿ ಮಾರ್ಪಡುವ ಮೂಲಕ ಪ್ರೇಕ್ಷಕರನ್ನು ನಿಬ್ಬೆರಾಗುವಂತೆ ಮಾಡಿತು.ಮೂರು ಗಂಟೆಗಳ ಕಾಲ ನಡೆದ ಈ ಸಾಂಸ್ಕೃತಿಕ ಉತ್ಸವದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 325ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಪ್ರದರ್ಶನಗಳು ನೃತ್ಯ ಲೋಕವನ್ನು ವೈಭವವಾಗಿ ಅನಾವರಣಗೊಳಿಸಿತು. ದೇಶ ವಿದೇಶಗಳ ನೂರಾರು ವಿದ್ಯಾರ್ಥಿಗಳು ತಂಡೋಪತಂಡವಾಗಿ ಒಂದೇ ವೇದಿಕೆಯಲ್ಲಿ ನಡೆಸಿಕೊಟ್ಟ ವಿವಿಧ ರಾಜ್ಯಗಳ ಕಲೆ, ಜನಪದ ನಾಟ್ಯ ಪ್ರಕಾರಗಳು ಮೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡು ಬೆರಗಾಗುವಂತೆ ಮಾಡಿದರು. ದೇಶದ ಸಾಂಸ್ಕೃತಿಕ ಕಲಾ ಸಿರಿವಂತಿಕೆಯನ್ನ ಸಾರಿದವು. ಅಷ್ಟೇ ಅಲ್ಲ ನೃತ್ಯಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ತೊಟ್ಟಿದ್ದ ವೇಷಭೂಷಣ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ರಂಗೇರುವಂತೆ ಮಾಡಿತು.ರಾಜ್ಯದ ಭರತನಾಟ್ಯ ಪ್ರದರ್ಶನ ಸೇರಿದಂತೆ ಮೋಹಿನಿ ಆಟ್ಟಂ, ಆಂಧ್ರದ ಬಂಜರನೃತ್ಯ, ಮಹಾರಾಷ್ಟ್ರದ ಲಾವಣಿ, ಕೇರಳದ ಒಪ್ಪಣಂ, ಒಡಗುತಿಟ್ಟು ಯಕ್ಷಗಾನ, ಒಡಿಸ್ಸಾದ ಕಥಕ್, ಮಲ್ಲಗಂಬ, ಗುಜರಾತಿನ ಗರ್ಬಾ ಮತ್ತು ದಾಂಡಿಯಾ, ಪಂಜಾಬಿನ ಬಾಂಗ್ಡ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್, ಮಣಿಪುರದ ಸ್ಟಿಕ್ ಡ್ಯಾನ್ಸ್ ಮತ್ತು ದೋಲ್ ಚಲಂ ಹಾಗೂ ಪ್ರದರ್ಶನ ಹಾಗೂ ನವದುರ್ಗಿಯರ ಸಮೂಹ ನೃತ್ಯ ನೋಡುಗರ ಮನಸೆಳೆದವು.ವಿವಿಧ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ನೋಡಿ ಆನಂದಿಸು ಸುಯೋಗ ದೊರೆತಿದ್ದಕ್ಕಾಗಿ ಕಲಾ ರಸಿಕರು ತೀವ್ರ ಸಂತೋಷ ವ್ಯಕ್ತಪಡಿಸಿದರು. ಅಂತ್ಯದವರೆಗೂ ಕಾರ್ಯಕ್ರಮವನ್ನು ವೀಕ್ಷಿಸಿದ ಪ್ರೇಕ್ಷಕರು ಅಳಿವಿನ ಅಂಚಿಗೆ ಸರಿಯುತ್ತಿರುವ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನ ಅರಿತು ಅದನ್ನ ಪುನರುಜ್ಜೀವನಗೊಳಿಸಲು ಇಂತಹ ಕಾರ್ಯಕ್ರಮಗಳ ಅಗತ್ಯತೆ ಇದ್ದು, ಇದನ್ನು ಉಳಿಸಿಕೊಂಡು ಬರುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವಾ ಅವರನ್ನು ಪ್ರೇಕ್ಷಕರು ಮುಕ್ತಕಂಠದಿಂದ ಅಭಿನಂದಿಸಿದರು.