ಕಲೆಯಿಂದ ಆತ್ಮವಿಶ್ವಾಸ ಹೆಚ್ಚಳ: ಶೇಖರ್

| Published : Aug 02 2025, 12:15 AM IST

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ಸುಗಮ ಸಂಗೀತ ಕಲಾ ತರಬೇತಿ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿದ್ಯಾರ್ಥಿ ಜೀವನದಲ್ಲಿಯೇ ಕಲಾ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದರ ಜೊತೆಗೆ, ಮನಸ್ಸಿನಲ್ಲಿನ ಋಣಾತ್ಮಕ ಅಂಶಗಳೂ ಮರೆಯಾಗಲು ಸಹಕಾರಿಯಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಹೇಳಿದ್ದಾರೆ.ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಆಯೋಜಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿನ ಸುಗಮ ಸಂಗೀತ ಕಲಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಸುಗಮ ಸಂಗೀತ ತರಬೇತಿ ಶಿಬಿರವನ್ನು ಸರ್ಕಾರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದ ಅವರು, ಸುಗಮ ಸಂಗೀತ ಮಾಧ್ಯಮವು ನಮ್ಮ ಭಾವನೆಗಳ ಅಭಿವ್ಯಕ್ತಿಗೆ ಸೂಕ್ತವಾಗಿದೆ ಎಂದು ತಿಳಿಸಿದರು. ಸಮಾಜದ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರನ್ನು ವಿದ್ಯಾರ್ಥಿಗಳು ಮಾದರಿಯಾಗಿ ಪರಿಗಣಿಸಿಕೊಂಡಲ್ಲಿ ಅವರು ಕೂಡ ಅಮೂಲ್ಯವಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು. ಸರ್ಕಾರ ಆಯೋಜಿಸುವ ವಿವಿಧ ಕಾರ್ಯಕ್ರಮಗಳಿಗೆ ಸಮಾಜದ ವಿವಿಧ ಸಂಘಸಂಸ್ಥೆಗಳೂ ಕೈಜೋಡಿಸಿದರೆ ಅಂತಹ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಸಾಧ್ಯವಿದೆ ಎಂದು ಅವರು ಹೇಳಿದರು.ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಹೆಸರೇ ಹೇಳುವಂತೆ ಸುಗಮವಾಗಿ ಕಲಿಕೆಯ ಸಂಗೀತವೇ ಸುಗಮ ಸಂಗೀತವಾಗಿದ್ದು, ಉಳಿದ ಪ್ರಕಾರಗಳಿಗೆ ಹೋಲಿಸಿದ್ದಲ್ಲಿ ಹೆಚ್ಚು ಜನರನ್ನು ತಲುಪುವಲ್ಲಿ ಸುಗಮ ಸಂಗೀತ ಯಶಸ್ವಿ ಸಂಗೀತ ಮಾಧ್ಯಮವಾಗಿದೆ ಎಂದರು.ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ನಿಸಾರ್ ಅಹಮ್ಮದ್, ಎಚ್.ಎಸ್.ವೆಂಕಟೇಶ ಮೂರ್ತಿ ಸೇರಿದಂತೆ ಅನೇಕ ಕವಿಗಳು ಸುಗಮ ಸಂಗೀತಕ್ಕೆ ತಮ್ಮ ಕವಿತೆಗಳ ಕೊಡುಗೆ ನೀಡಿದ್ದಾರೆ. ಹೀಗಾಗಿ ಕಾವ್ಯವೇ ಸುಗಮ ಸಂಗೀತದ ಸೌಂದರ್ಯಕ್ಕೆ ಮೂಲದಂತಿದೆ ಎಂದು ಹೇಳಿದರು.ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಕಡಮೆಯಾಗಲು ಇಲ್ಲಿನ ಹವಾಮಾನ ವೈಪರೀತ್ಯ ಕೂಡ ಕಾರಣವಾಗಿದೆ. ಹೀಗಿದ್ದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೀಗ 110 ವಿದ್ಯಾರ್ಥಿನಿಯರಿಗೆ ಸುಗಮಸಂಗೀತ ಶಿಬಿರವನ್ನು 6 ತಿಂಗಳು ಮೂರು ತರಗತಿಗಳಂತೆ ಆಯೋಜಿಸಿರುವುದು ಯುವ ಹಾಡುಗಾರರನ್ನು ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.ಇಲ್ಲಿ ಸುಗಮ ಸಂಗೀತ ಕಲಿತ ವಿದ್ಯಾರ್ಥಿನಿಯರಿಗೆ ವಿಧಾನಸೌಧದ ಬ್ಯಾಕ್ವೆಂಟ್ ಸಭಾಂಗಣದಲ್ಲಿ ರಾಜ್ಯದ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಹಾಡುವ ಅವಕಾಶವಿರುವುದರಿಂದಾಗಿ ಕೊಡಗಿನ ಗಾಯನ ಪ್ರತಿಭೆಗಳಿಗೂ ಇದು ಅತ್ಯುತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.ಸಂಸ್ಕಾರವಂತ ಸಮಾಜ ನಿರ್ಮಾಣ:

ಕೊಡಗು ಶಿಕ್ಷಣ ಇಲಾಖೆಯ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ಮಕ್ಕಳಿಗೆ ಸೂಕ್ತ ಸಂಸ್ಕಾರವನ್ನು ಬಾಲ್ಯದಲ್ಲಿಯೇ ತಿಳಿಸಿದಾಗ ಸಂಸ್ಕಾರವಂತ ಸಮಾಜ ನಿರ್ಮಾಣ ಸಾಧ್ಯವಿದೆ. ಪಠ್ಯದಂತೆಯೇ ಸಂಗೀತ, ನಾಟ್ಯ, ಕ್ರೀಡೆಗಳೂ ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ವಿದ್ಯಾರ್ಥಿನಿಯರು ಇಂತಹ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಮಡಿಕೇರಿ ತಾಲೂಕಿನ ಸಹಾಯಕ ನಿರ್ದೇಶಕರಾದ ಬಾಲಕೃಷ್ಣ ರೈ ಮಾತನಾಡಿ, ಸಂಗೀತದಲ್ಲಿನ ಅವಕಾಶಗಳನ್ನು ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಆಸಕ್ತರಿಗೆ ಉಚಿತವಾಗಿ ಸುಗಮ ಸಂಗೀತ ಕಲಿಕೆಗೆ ದೊರಕಿರುವ ಅತ್ಯುತ್ತಮ ಅವಕಾಶ ಇದಾಗಿದೆ ಎಂದು ನುಡಿದರು. ವಾರದಲ್ಲಿ ಮೂರು ದಿನ ಶಿಬಿರ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಮಾಹಿತಿ ನೀಡಿ, ವಿಶೇಷ ಘಟಕ ಯೋಜನೆಯಡಿ ವಾರದಲ್ಲಿ 3 ದಿನಗಳ ಕಾಲ ಸಂಜೆ ಸಮಯದಲ್ಲಿ ಸಂಗೀತ ಶಿಕ್ಷಕಿ ವೀಣಾ ಹೊಳ್ಳ, ವಿದ್ಯಾರ್ಥಿನಿಯರಿಗೆ ಸುಗಮ ಸಂಗೀತದ ಪಾಠ ಹೇಳಿಕೊಡಲಿದ್ದಾರೆ. 6 ತಿಂಗಳಲ್ಲಿ 18 ತರಗತಿಗಳಿಂದ 30 ಹಾಡುಗಳನ್ನು ವಿದ್ಯಾರ್ಥಿನಿಯರು ಕಲಿಯಬೇಕಾಗಿದೆ ಎಂದರು.ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯ ಪಾಲಕಿ ಗೀತಾ ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.