ಕಲೆಯ ಮೂಲಕ ಬದುಕಿನ ಅನುಭವಗಳನ್ನು ದಾಖಲಿಸುವ ಶಕ್ತಿ ಕಲಾವಿದರಿಗಿದೆ. ಜಲವರ್ಣ ಚಿತ್ರಕಲೆ ಪ್ರಕೃತಿ, ಜನಜೀವನ ಹಾಗೂ ಭಾವನೆಗಳನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಮಾಧ್ಯಮವಾಗಿದ್ದು, ಯುವ ಕಲಾವಿದರು ಇಂತಹ ತರಬೇತಿ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಳ್ಳ ಬೇಕೆಂದು ಬೀದರ್‌ ಮಹಾನಗರ ಪಾಲಿಕೆ ವಲಯ ಆಯುಕ್ತ ನಾಗಣ್ಣ ಮನೋಹರ ಪರೀಟ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕಲೆಯ ಮೂಲಕ ಬದುಕಿನ ಅನುಭವಗಳನ್ನು ದಾಖಲಿಸುವ ಶಕ್ತಿ ಕಲಾವಿದರಿಗಿದೆ. ಜಲವರ್ಣ ಚಿತ್ರಕಲೆ ಪ್ರಕೃತಿ, ಜನಜೀವನ ಹಾಗೂ ಭಾವನೆಗಳನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಮಾಧ್ಯಮವಾಗಿದ್ದು, ಯುವ ಕಲಾವಿದರು ಇಂತಹ ತರಬೇತಿ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಳ್ಳ ಬೇಕೆಂದು ಬೀದರ್‌ ಮಹಾನಗರ ಪಾಲಿಕೆ ವಲಯ ಆಯುಕ್ತ ನಾಗಣ್ಣ ಮನೋಹರ ಪರೀಟ್‌ ಹೇಳಿದರು.

ನಗರದ ಡಾ.ಎಸ್‌.ಎಂ.ಪಂಡಿತ್‌ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿ ಆಯೋಜಿಸಿರುವ ಜಲವರ್ಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಚಿತ್ರಕಲೆ ಕೇವಲ ಬಣ್ಣಗಳನ್ನು ಕಾಗದದ ಮೇಲೆ ಮೂಡಿಸುವ ಕಲೆಯಲ್ಲ, ಅದು ಕಲಾವಿದನ ಕಲ್ಪನೆ, ಭಾವನೆ ಮತ್ತು ಸುತ್ತಲಿನ ಸಮಾಜವನ್ನು ನೋಡುವ ದೃಷ್ಟಿ ಕೋನವನ್ನು ಪ್ರತಿಬಿಂಬಿಸುತ್ತದೆ. ಜಲವರ್ಣದಂತಹ ಸೂಕ್ಷ್ಮ ಕಲಾ ಪ್ರಕಾರದಲ್ಲಿ ಉತ್ತಮ ತರಬೇತಿ ಪಡೆದರೆ ಕಲಾವಿದರು ತಮ್ಮದೇ ಆದ ಕಲಾಶೈಲಿಯನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಸಂಚಾಲಕರಾದ ಬಸವರಾಜ ಎಲ್‌. ಜಾನೆ ಪ್ರಾಸ್ತಾವಿಕ ಮಾತನಾಡಿ, ರಾಜ್ಯದ ವಿವಿಧ ಭಾಗಗಳ ಪ್ರತಿಭಾವಂತ ಕಲಾವಿದರನ್ನು ಒಂದೆಡೆ ಸೇರಿಸಿ ಅವರ ಕಲಾ ಕೌಶಲ ವೃದ್ಧಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದರು.

ಡಾ.ಎಸ್‌.ಎಂ.ಪಂಡಿತ್‌ ಚಿತ್ರಕಲಾ ಮಹಾವಿದ್ಯಾಲಯದ ಅಧ್ಯಕ್ಷೆ ಕವಿತಾ ಬಿ. ಪಂಚಾಕ್ಷರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದರಾದ ಪ್ರಭಾಕರ, ಅಶೋಕ ಹಿರೇಮಠ, ಸೋಮಶೆಟ್ಟಿ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಷ್ಣುಕಾಂತ ಠಾಕೂರ, ಡಾ.ಎಸ್‌.ಎಂ.ಪಂಡಿತ್‌ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ರಾದ ಸುರೇಖಾ ವಾಲ್ದೊಡ್ಡೆ, ಮಂಜುಳಾ ಜಾನೆ, ಬಿ.ಕೆ.ಬಡಿಗೇರ್‌, ಯೋಗೇಶ ಮಠದ, ನಾಗರಾಜ ಜೋಗಿ, ಸಂತೋಷ ಹೊನ್ನಿಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸೆ.21ರಿಂದ 24ರವರೆಗೆ ನಡೆಯಲಿರುವ ಕಾರ್ಯಾಗಾರದಲ್ಲಿ ಹಾವೇರಿ, ಗದಗ, ಬೀದರ್‌, ಮೈಸೂರು, ಪಾವಗಡ, ಗುಳೇದಗುಡ್ಡ, ಇಳಕಲ್‌, ಧಾರವಾಡ, ದೊಡ್ಡಮಾಲೂರು, ಯಾದಗಿರಿ ಹಾಗೂ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಅನೇಕ ಕಲಾವಿದರು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಜಯಶ್ರೀ ಸ್ವಾಗತಿಸಿ ಪೀಟರ್‌ ನಿರೂಪಿಸಿದರೆ ಸುಧಾರಾಣಿ ವಂದಿಸಿದರು.