ಕಲಾವಿದರ ಸೃಜನಶೀಲತೆ, ಪ್ರತಿಭೆ ಹಾಗೂ ಸಾಧನೆಗಳನ್ನು ಗುರುತಿಸಿ, ಗೌರವಿಸುವುದರಿಂದ ಕಲಾ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಪ್ರೇರಣೆ ದೊರೆಯುತ್ತದೆ.
ಕನ್ನಡಪ್ರಭ ವಾರ್ತೆ ಗದಗ
ಕಲಾವಿದರ ಸೃಜನಶೀಲತೆ, ಪ್ರತಿಭೆ ಹಾಗೂ ಸಾಧನೆಗಳನ್ನು ಗುರುತಿಸಿ, ಗೌರವಿಸುವುದರಿಂದ ಕಲಾ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಪ್ರೇರಣೆ ದೊರೆಯುತ್ತದೆ. ಕಲೆ ಕೇವಲ ಕೇವಲ ಅಭಿವ್ಯಕ್ತಿಯ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಜೀವನಾನುಭವಗಳನ್ನು ಬಿಂಬಿಸುವ ಮಹತ್ವದ ಕ್ಷೇತ್ರವಾಗಿದೆ ಎಂದು ಹಿರಿಯ ಕಲಾವಿದ ಅಶೋಕ್ ಟಿ. ಅಕ್ಕಿ ಹೇಳಿದರು.ಶುಕ್ರವಾರ ಗದಗ ನಗರದ ಸಂಸ್ಕೃತಿ ಕನ್ವೆನ್ಷನ್ಸ್ ಹಾಲ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ 53ನೇ ವಾರ್ಷಿಕ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಕಲಾ ಕ್ಷೇತ್ರದಲ್ಲಿ ಸೃಜನಶೀಲತೆಯಷ್ಟೇ ವ್ಯವಸ್ಥಿತ ಕಾರ್ಯಶೈಲಿಯೂ ಮುಖ್ಯವಾಗಿದೆ. ಕಲಾವಿದರು ಕೇವಲ ಕಲಾಕೃತಿಗಳ ರಚನೆಗೆ ಸೀಮಿತವಾಗದೆ, ಅವುಗಳ ಸಂರಕ್ಷಣೆ, ಪ್ರದರ್ಶನ ಹಾಗೂ ಸೂಕ್ತ ಪ್ರಚಾರಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು.
ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಕಲಾಕೃತಿಗಳು ಕೋಟ್ಯಂತರ ರೂಪಾಯಿಗಳಿಗೆ ಹರಾಜಾಗುತ್ತಿವೆ. ಕಲಾವಿದರ ಅನನ್ಯ ಕಲ್ಪನೆ ಮತ್ತು ಕಲಾಕೃತಿಗಳ ವೈಶಿಷ್ಟ್ಯಕ್ಕೆ ಜಾಗತಿಕ ಮನ್ನಣೆ ದೊರೆಯುತ್ತಿದೆ. ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಉಳಿಸಿಕೊಂಡು, ಆಧುನಿಕ ಕಲಾ ಪ್ರಯೋಗಗಳಿಗೂ ಮುಕ್ತ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮದ್ರಾಸ್ ಆರ್ಟ್ ಸ್ಕೂಲ್ ಹಾಗೂ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಂತಹ ಪ್ರತಿಷ್ಠಿತ ಸಂಸ್ಥೆಗಳು ಕಲೆಯ ಬೆಳವಣಿಗೆಗೆ ಮತ್ತು ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.ಹೊಸ ಪೀಳಿಗೆಯ ಕಲಾವಿದರಿಗೆ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ. ಯುವ ಕಲಾವಿದರ ಕಲಾಕೃತಿಗಳಿಗೆ ಪ್ರದರ್ಶನದ ವೇದಿಕೆ ಒದಗಿಸಿ ಪ್ರೋತ್ಸಾಹಿಸಿದಾಗ ಅವರ ಪ್ರತಿಭೆ ಸಮಾಜಕ್ಕೆ ಪರಿಚಯವಾಗುತ್ತದೆ. ಇದರಿಂದ ಅವರು ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ರಿಜಿಸ್ಟ್ರಾರ್ ಎನ್. ನಮ್ರತಾ, ಹಿರಿಯ ಕಲಾವಿದ ಆರ್.ಡಿ. ಕಡ್ಲಿಕೊಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಹಾಗೂ ಅಕಾಡೆಮಿಯ ಸಿಬ್ಬಂದಿ ಉಪಸ್ಥಿತರಿದ್ದರು.