ಕಲೆ ಎನ್ನುವುದು ಕಲ್ಪನೆಗೂ ಮೀರಿದ್ದಾಗಿದ್ದು, ಆ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡಪ್ರಭ ಪತ್ರಿಕೆ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ಚಿತ್ರಕಲಾ ಸ್ಪರ್ಧೆಯಂತ ಪತ್ರಿಕೇತರ ಕೆಲಸಗಳ ಮೂಲಕ ಉತ್ತಮ ವೇದಿಕೆ ಕಲ್ಪಿಸುತ್ತಿದೆ ಎಂದು ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಹಾಗೂ ಕನ್ನಡಪ್ರಭ ಪತ್ರಿಕೆ ಪ್ರಕಾಶಕರೂ ಆದ ಬಿ.ವಿ. ಮಲ್ಲಿಕಾರ್ಜುನಯ್ಯ ತಿಳಿಸಿದರು. ಮಕ್ಕಳು ಕೂಡ ಮುಂದಿನ ದಿನಗಳಲ್ಲಿ ಉತ್ತಮ ಕಲಾವಿದರಾಗುವ ಮೂಲಕ ಇಂತಹ ಸಾಕಷ್ಟು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಯಶಸ್ಸು ಕಾಣಿರಿ ಎಂದು ಹಾರೈಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕಲೆ ಎನ್ನುವುದು ಕಲ್ಪನೆಗೂ ಮೀರಿದ್ದಾಗಿದ್ದು, ಆ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡಪ್ರಭ ಪತ್ರಿಕೆ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ಚಿತ್ರಕಲಾ ಸ್ಪರ್ಧೆಯಂತ ಪತ್ರಿಕೇತರ ಕೆಲಸಗಳ ಮೂಲಕ ಉತ್ತಮ ವೇದಿಕೆ ಕಲ್ಪಿಸುತ್ತಿದೆ ಎಂದು ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಹಾಗೂ ಕನ್ನಡಪ್ರಭ ಪತ್ರಿಕೆ ಪ್ರಕಾಶಕರೂ ಆದ ಬಿ.ವಿ. ಮಲ್ಲಿಕಾರ್ಜುನಯ್ಯ ತಿಳಿಸಿದರು.

ನಗರದ ಗಾಂಧಿಭವನದಲ್ಲಿ ಕನ್ನಡಪ್ರಭ, ಸುವರ್ಣ ನ್ಯೂಸ್‌ ಹಾಗೂ ಜನಮಿತ್ರ ಸಹಯೋಗದಲ್ಲಿ ಪರಿಸರ ಹಾಗೂ ವನ್ಯಜೀವಿ ಕುರಿತು ಭಾನುವಾರ ನಡೆದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಪತ್ರಿಕೆಗಳು ಕೇವಲ ಸುದ್ದಿ ಪ್ರಚಾರಕ್ಕಷ್ಟೇ ಸಂಇತ ಆಗಬಾರದು. ಈ ನಿಟ್ಟಿನಲ್ಲಿ ಕನ್ನಡಪ್ರಭ ಈ ಹೆಜ್ಜೆ ಇಟ್ಟಿದ್ದು, ಮಕ್ಕಳಲ್ಲಿ ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅದೇ ವಸ್ತು ವಿಷಯಕ್ಕೆ ಸಂಬಂಧಪಟ್ಟ ಚಿತ್ರಕಲಾ ಸ್ಪರ್ಧೆಯನ್ನು ಈಗಾಗಲೇ ತಾಲೂಕು ಮಟ್ಟದಲ್ಲಿ ನಡೆಸಿ ಇದೀಗ ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಆಯ್ಕೆಯಾದ ಮೂವರು ಸ್ಪರ್ಥಿಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್‌. ಕೆಂಚೇಗೌಡ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಕನ್ನಡಪ್ರಭ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ. ಪರಿಸರ ಕಲುಷಿತ ಆಗುತ್ತಿರುವ ಈ ದಿನಗಳಲ್ಲಿ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮಕ್ಕಳು ಕೂಡ ಮುಂದಿನ ದಿನಗಳಲ್ಲಿ ಉತ್ತಮ ಕಲಾವಿದರಾಗುವ ಮೂಲಕ ಇಂತಹ ಸಾಕಷ್ಟು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಯಶಸ್ಸು ಕಾಣಿರಿ ಎಂದು ಹಾರೈಸಿದರು.

ಹಿರಿಯ ಚಿತ್ರ ಕಲಾವಿದರಾದ ಬಿ.ಎಸ್‌. ದೇಸಾಯಿ ಮಾತನಾಡಿ, ಬಹಳಷ್ಟು ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಸರಿಯಾಗಿ ಪ್ರಸ್ತುತಪಡಿಸಿದವರು ಗೆಲ್ಲುತ್ತಾರೆ. ಇಲ್ಲದವರು ಸೋಲುತ್ತಾರೆ. ಮಕ್ಕಳಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ. ಹಾಗೆಯೇ ಅವರ ಪ್ರತಿಭೆಯನ್ನು ಗುರ್ತಿಸುವವರು ಕೂಡ ಪ್ರಾಮಾಣಿಕವಾಗಿ ಗುರ್ತಿಸಿದಾಗ ಕಲೆಗೆ ತಕ್ಕ ಪ್ರೋತ್ಸಾಹ ಸಿಗುತ್ತದೆ. ಅದಕ್ಕೆ ಕನ್ನಡಪ್ರಭ, ಸುವರ್ಣ ನ್ಯೂಸ್‌ ಹಾಗೂ ಜನಮಿತ್ರ ಸೂಕ್ತ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಚಿತ್ರಕಲೆ ಎನ್ನುವುದು ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ಬಂದು ಸಾಕಷ್ಟು ಕಲೆಗಳಿಗೆ ಹೊಡೆತ ಬಿದ್ದಿದೆ. ಹಾಗಾಗಿ ಇಂತಹ ಸಂಕಷ್ಟದ ದಿನಗಳಲ್ಲಿ ಕಲಾವಿದರು ಕೂಡ ಕ್ರಿಯಾತ್ಮಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಎಚ್‌.ಬಿ. ಮದನ್‌ ಗೌಡ, ಜನಮಿತ್ರ ಪತ್ರಿಕೆ ಸಂಪಾದಕರಾದ ನವೀನ್‌, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಹರೀಶ್‌, ಕನ್ನಡಪ್ರಭ ಪತ್ರಿಕೆ ಜಾಹೀರಾತು ಪ್ರತಿನಿಧಿ ಮಣಿಕಂಠ ಇದ್ದರು.

ರಾಜ್ಯಮಟ್ಟಕ್ಕೆ ಆಯ್ಕೆಯಾದವರು:

ಮೊದಲ ಸ್ಥಾನ - ಸಾನ್ವಿ ಎಸ್‌. ಹಾಸನ, ದ್ವಿತೀಯ ಸ್ಥಾನ- ಥೋಷಿತ್‌ ವೈ.ಎಸ್‌. ಸಕಲೇಶಪುರ, ತೃತೀಯ ಸ್ಥಾನ ಇಬ್ಬರಿಗೆ ಸಿಕ್ಕಿದ್ದು- ಬೇಲೂರಿನ ಸಾನಿಕಾ ಕೆ ಶೆಟ್ಟಿ ಹಾಗೂ ಎ.ಜೆ.ಲಿಖಿತ ಸಕಲೇಶಪುರ.

ಆ ನಂತರದಲ್ಲಿ ಹಾಸನದ ಆಶಿಶ್‌ ಹಾಗೂ ಬೇಲೂರಿನ ಹುದಾಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

ತೀರ್ಪುಗಾರರಾಗಿ ಹಿರಿಯ ಚಿತ್ರ ಕಲಾವಿದರಾದ ಬಿ.ಎಸ್‌.ದೇಸಾಯಿ ಹಾಗೂ ಆರ್‌.ಸಿ. ಕಾರದಕಟ್ಟಿ ಕಾರ್ಯ ನಿರ್ವಹಿಸಿದರು.