ಸಾರಾಂಶ
ಶಿರಸಿ: ತಾಲೂಕಿನ ಗೋಳಿ ಸಿದ್ದವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಪಂಡಿತ ಆರ್.ವಿ. ಹೆಗಡೆ ಹಳ್ಳದಕೈ ತಮ್ಮ ತಂದೆಯವರಾದ ದಿ. ವಿಶ್ವನಾಥ ಹೆಗಡೆ ಮತ್ತು ತಮ್ಮ ಗುರುಗಳಾದ ದಿ. ಡಾ. ಬಿಂದುಮಾಧವ ಪಾಠಕ್ ಅವರ ಸ್ಮರಣಾರ್ಥವಾಗಿ ಕಳೆದ ೨೩ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸ್ವರಾಂಜಲಿ ಕಾರ್ಯಕ್ರಮ ಕಿಕ್ಕಿರಿದ ಸಂಗೀತಾಭಿಮಾನಿಗಳನ್ನು ಭಾವಪರವಶಗೊಳಿಸಿ, ಸಂಗೀತದ ರಸದೂಟ ಬಡಿಸುವಲ್ಲಿ ಯಶಸ್ವಿಯಾಯಿತು.
ಯಾವುದೇ ಸಭೆ, ಭಾಷಣಗಳಿಲ್ಲದೇ ನೇರವಾಗಿ ಆರಂಭಗೊಂಡ ಸ್ವರಾಂಜಲಿ ಕಾರ್ಯಕ್ರಮವನ್ನು ಪಂ. ರಾಮಚಂದ್ರ ಹೆಗಡೆ ಹಳ್ಲದಕೈ ಮತ್ತು ಸರೋಜಾ ಹೆಗಡೆ ದಂಪತಿ ದೀಪ ಬೆಳಗಿಸಿ, ಉದ್ಘಾಟಿಸಿದರು. ಪಂ. ಆರ್.ವಿ. ಹೆಗಡೆ ಸಭೆಯನ್ನು ಸ್ವಾಗತಿಸಿ, ಆರಂಭಿಕವಾಗಿ ತಮ್ಮ ಸುರ್‌ಬಹಾರ್ ವಾದನ ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟು ರಾಗ್ ಯಮನ್‌ನ್ನು ಪ್ರಸ್ತುತಗೊಳಿಸಿದರು. ಸುರಬಹಾರ್ ವಾದನ ಬಹುಅಪರೂಪವಾಗಿದ್ದು, ಸೀತಾರ್ ಮತ್ತು ರುದ್ರವೀಣೆಯ ನಡುವಿನ ವಾದನ ಇದಾಗಿದೆ. ನಂತರ ದುನ್‌ನ್ನು ನುಡಿಸಿದರು.ನಂತರದಲ್ಲಿ ಗಾಯಕ ವಿ. ನಾಗಭೂಷಣ ಹೆಗಡೆ ಬಾಳೆಹದ್ದ ತಮ್ಮ ಗಾಯನವನ್ನು ಆರಂಭಿಸಿ, ರಾಗ್ ರಾಜ್ ಕಲ್ಯಾಣದಲ್ಲಿ ವಿಸ್ತಾರವಾಗಿ ಹಾಡಿದರು. ನಂತರ ರಾಗ್ ಧಾನಿಯಲ್ಲಿ ಹಾಡಿ ಕೊನೆಯಲ್ಲಿ ಭಕ್ತಿ ಪದವನ್ನು ಹಾಡುತ್ತ ತಮ್ಮ ಕಛೇರಿ ಮುಗಿಸಿದರು.
ಪಂ. ಹಳ್ಳದಕೈ ಅವರ ಸುರ್‌ಬಹಾರ್‌ಗೆ ಮತ್ತು ವಿ. ಬಾಳೆಹದ್ದ ಗಾಯನಕ್ಕೆ ತಬಲಾದಲ್ಲಿ ಗುರುರಾಜ ಆಡುಕಳ ಮತ್ತು ಗಾನಕ್ಕೆ ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಸಾಥ್ ನೀಡಿದರು.ಸ್ವರಾಂಜಲಿ ಎರಡನೆಯ ಅಧಿವೇಶನದಲ್ಲಿ ಆರಂಭಗೊಂಡ ಸೀತಾರ್ ವಾದನದಲ್ಲಿ ಅಂತಾರಾಷ್ಟ್ರೀಯ ಸೀತಾರ್ ಖ್ಯಾತಿಯ ಉಸ್ತಾದ್ ಛೋಟೆ ರೆಹಿಮತ್ ಖಾನ್ ಗೋವಾ ಅವರು ತಮ್ಮ ಸೀತಾರ್ ಕಾರ್ಯಕ್ರಮ ನಡೆಸಿಕೊಡುತ್ತ ರಾಗ್ ಭಾಗೇಶ್ರೀಯನ್ನು ಸರಿಸುಮಾರು ಮುಕ್ಕಾಲು ಗಂಟೆಗಳ ಕಾಲ ಮಿಕ್ಕಿ ನುಡಿಸಿದರು. ನಂತರ ಧುನ್‌ನ್ನು ಪ್ರಸ್ತುತಗೊಳಿಸುತ್ತಿರುವಾಗ ತಬಲಾದಲ್ಲಿ ಸಾಥ್ ನೀಡಿದ ಡಾ. ಉದಯ ಕುಲಕರ್ಣಿ ಅವರ ತಬಲಾ ಹಾಗೂ ಖಾನ್ ಅವರ ಸಿತಾರ್ ಜುಗಲಬಂಧಿಗೆ ಪ್ರತಿ ಹಂತದಲ್ಲಿ ಸಭಿಕರ ಕರತಾಡನದ ಮೂಲಕ ಆನಂದ ಅನುಭವಿಸಿದ್ದು, ಸುಂದರವಾದ ಕಾರ್ಯಕ್ರಮವಾಗಿ ಸಾಕ್ಷೀಕರಿಸಲ್ಪಟ್ಟಿತು.
ವಾದನದಲ್ಲಿ ರಾಗ, ತಾಳ, ಲಯಗಳ ಏರಿಳಿಕೆ, ಬೊಲ್‌ಗಳ ಸ್ಪಷ್ಟ ಉಚ್ಚರಿಕೆ ಮನಸ್ಸಿಗೆ ಸಂತೋಷ ಉಂಟು ಮಾಡುವಂತಿತ್ತು. ಸ್ವರಾಂಜಲಿಯ ಕೊನೆಯ ಕಾರ್ಯಕ್ರಮವಾಗಿ ಖ್ಯಾತ ಗಾಯಕ ಗೋವಾದ ಪಂ. ಡಾ. ಶಶಾಂಕ ಮುಕ್ತೇದಾರ ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ಆರಂಭದಲ್ಲಿ ರಾಗ್ ಜೋಗ್‌ಕಂಸ್‌ನ್ನು ಒಂದು ಗಂಟೆಗೂ ಮಿಕ್ಕಿ ಹಾಡಿದರು. ನಂತರ ರಾಘ್ ಬಸಂತ ಬಾಹರ್‌ನ್ನು ಪ್ರಸ್ತುತಪಡಿಸಿದರು. ಕೊನೆಯಲ್ಲಿ ರಾಘ್ ಭೈರವಿಯಲ್ಲಿ ಗುರುವಿನ ಚರಣ... ಎಂಬ ಭಕ್ತಿ ಪ್ರಧಾನ ಹಾಡಿ, ಸಂಗೀತ ಕಾರ್ಯಕ್ರಮ ಸಮಾಪ್ತಿಗೊಳಿಸಿದರು.ಪಂ. ಮುಕ್ತೇದಾರ ಅವರ ಗಾಯನಕ್ಕೆ ತಬಲಾದಲ್ಲಿ ಡಾ. ಉದಯ ಕುಲಕರ್ಣಿ ಹಾಗೂ ಸಂವಾದಿನಿಯಲ್ಲಿ ಭರತ ಹೆಗಡೆ ಹೆಬ್ಬಲಸು, ಹಿನ್ನೆಲೆಯ ಸಹಗಾನ ಹಾಗೂ ತಾನಪೂರದಲ್ಲಿ ಮನು ಹೆಗಡೆ ಪುಟ್ಟಣಮನೆ, ಗೌತಮ ಅವರು ಸಮರ್ಥವಾಗಿ ಸಾಥ್ ನೀಡಿದರು.
ಗೋಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಲ್. ಹೆಗಡೆ ಹಲಸಿಗೆ ಕಲಾವಿದರಿಗೆ ಪ್ರಸಾದ ನೀಡಿ, ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಪಂ. ಹಳ್ಳದಕೈ ಅವರ ಶಿಷ್ಯ ವೃಂದದವರು ೭೦ರ ಇಳಿ ವಯಸ್ಸಿನ ಆರ್.ವಿ. ಹೆಗಡೆ ದಂಪತಿಗೆ ಗುರುವಂದನೆ ಕಾರ್ಯಕ್ರಮ ನೆರವೇರಿಸಿದರು. ಗಿರಿಧರ ಕಬ್ನಳ್ಳಿ ಕಲಾವಿದರನ್ನು ಪರಿಚಯಿಸಿ, ನಿರೂಪಿಸಿ, ವಂದಿಸಿದರು.