ವಿದ್ಯಾರ್ಥಿ ಜಾನಪದ ಲೋಕೋತ್ಸವ ಹಿನ್ನಲೆಯಲ್ಲಿ ಜಾನಪದ ಲೋಕದ ಆವರಣದಲ್ಲಿ 20ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿತ್ತು.ಈ ಮಳಿಗೆಗಳಿಗೆ ಸಂಪೂರ್ಣವಾಗಿ ಗ್ರಾಮೀಣ ಸೊಗಡಿನ ಟಚ್ ನೀಡಲಾಗಿತ್ತು. ಜಾನಪದ ಕಲಾ ಸಾಧನಗಳು ಮಳಿಗೆ, ಬುತ್ತಿ, ಆಹಾರ ಮೇಳ, ಆರೋಗ್ಯ ತಪಾಸಣೆ ಯನ್ನು ಮಾಡಲಾಯಿತು.
ಕನ್ನಡಪ್ರಭ ವಾರ್ತೆ ರಾಮನಗರ
ಜಾನಪದರ ಕಾಶಿ ಎಂದೇ ಕರೆಯಲ್ಪಡುವ ಜಾನಪದ ಲೋಕದಲ್ಲಿ ಎರಡು ದಿನ ನಡೆಯಲಿರುವ ವಿದ್ಯಾರ್ಥಿ ಜಾನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ಮೊದಲ ದಿನವಾದ ಶನಿವಾರ ಇಡೀ ದಿನ ವಿದ್ಯಾರ್ಥಿಗಳಿಂದ ಜಾನಪದ ಕಲೆಗಳು ಪ್ರದರ್ಶನಗೊಂಡವು.ಮೈಸೂರು, ಚಿಕ್ಕಮಗಳೂರು, ತುಮಕೂರು, ಉಡುಪಿ, ಮಂಡ್ಯ, ಬೆಳಗಾವಿ, ಹಾಸನ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ತಮ್ಮ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ನೆರೆದಿದ್ದ ಕಲಾಭಿಮಾನಿಗಳಿಂದ ಸೈ ಎನಿಸಿಕೊಂಡರು.
ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಯಕ್ಷಗಾನ, ಬುಡಕಟ್ಟು ಹಾಡಿಗೆ ನೃತ್ಯ ಪ್ರದರ್ಶನ, ಸೋಮನ ಕುಣಿತ , ಕೊಂಬು ಕಹಳೆ, ಕೋಲಾಟ, ಪೂಜಾ ಕುಣಿತ ನೋಡುಗರನ್ನು ಆಕರ್ಷಿಸಿತು.ವೀರಗಾಸೆ, ಕಂಗಿಲು ಕುಣಿತ, ತಮಟೆ ವಾದನ, ಕರಪಾಲ ಮೇಳ, ಗಾರುಡಿ ಗೊಂಬೆ, ಹಗಲು ವೇಷ, ವೀರಭದ್ರ ಕುಣಿತ ಸೇರಿದಂತೆ ವಿದ್ಯಾರ್ಥಿಗಳ ವಿವಿಧ ಕಲಾ ಪ್ರದರ್ಶನ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದರು.
ರಾತ್ರಿ ಬೈರನಹಳ್ಳಿ ಶಿವರಾಮ್ ನಿರ್ದೇಶನದಲ್ಲಿ ಜಾನಪದ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಕೆರೆಗೆ ಹಾರ ಜನಪದ ರೂಪಕ ಪ್ರದರ್ಶಿಸಿ ಸೈ ಎನಿಸಿಕೊಂಡರು.-----
ಮೆರಗು ನೀಡಿದ ಸ್ಟಾಲ್‌ಗಳು:ವಿದ್ಯಾರ್ಥಿ ಜಾನಪದ ಲೋಕೋತ್ಸವ ಹಿನ್ನಲೆಯಲ್ಲಿ ಜಾನಪದ ಲೋಕದ ಆವರಣದಲ್ಲಿ 20ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿತ್ತು.
ಈ ಮಳಿಗೆಗಳಿಗೆ ಸಂಪೂರ್ಣವಾಗಿ ಗ್ರಾಮೀಣ ಸೊಗಡಿನ ಟಚ್ ನೀಡಲಾಗಿತ್ತು. ಜಾನಪದ ಕಲಾ ಸಾಧನಗಳು ಮಳಿಗೆ, ಬುತ್ತಿ, ಆಹಾರ ಮೇಳ, ಆರೋಗ್ಯ ತಪಾಸಣೆ ಯನ್ನು ಮಾಡಲಾಯಿತು. ಲೋಕೋತ್ಸವ ನೋಡಲು ಆಗಮಿಸಿದ ಸಾರ್ವಜನಿಕರು ಮಳಿಗೆಯಲ್ಲಿ ವಿವಿಧ ಪದಾರ್ಥಗಳನ್ನು ಖರೀದಿಸಿ ಖುಷಿಪಟ್ಟರು.