ಸಾರಾಂಶ
ಶೃಂಗೇರಿ ತಾಲೂಕಿನ ಹೊನ್ನವಳ್ಳಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ 48 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಶೃೆಂಗೇರಿ
ಯಕ್ಷಗಾನ ಕಲೆ ನವರಸ ಕಲೆಗಳಲ್ಲಿ ಪ್ರಮುಖ ಕಲೆಯಾಗಿದ್ದು, ಇದು ತನ್ನದೇ ಆದ ಪ್ರಾಚೀನತೆ, ಇತಿಹಾಸ ಹೊಂದಿದೆ. ಈ ಕಲೆ ಉಳಿಸಿ ಬೆಳೆಸುವುದು ಪ್ರೇಕ್ಷಕರ ಕೈಯಲ್ಲಿದೆ ಎಂದು ಯಕ್ಷಗಾನ ಕಲಾವಿದ ನಾಗೇಶ್ ಕಾಮತ್ ಹೇಳಿದರು.ಅವರು ತಾಲೂಕಿನ ಹೊನ್ನವಳ್ಳಿ ಹೊಂಬಾಗಿನಲ್ಲಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘದ 48ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ, ಕಲಾವಿದರಿಗೆ ಸನ್ಮಾನ, ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಕ್ಷಗಾನ ಕಲೆ ಅದ್ಭುತ ಕಲೆಯಾಗಿದೆ. ಇದು ಕರಾವಳಿ ಭಾಗದಲ್ಲಿ ಹುಟ್ಟಿದ್ದರೂ ಮಲೆನಾಡಿನಲ್ಲಿ ಹೆಚ್ಚು ಪ್ರಚಲಿತಗೊಂಡು ಹೆಚ್ಚಿನ ಪ್ರೋತ್ಸಾಹ ಪಡೆಯುವುದರ ಜೊತೆಗೆ ತನ್ನದೇ ಆದ ಪ್ರೇಕ್ಷಕ ವರ್ಗ ಹೊಂದಿದೆ. ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಕಥಾವಸ್ತುಗಳೊಂದಿಗೆ ಯಕ್ಷಗಾನ ಕಲೆ ಸಮಾಜಕ್ಕೆ ತನ್ನದೇ ಆದ ರೀತಿಯಲ್ಲಿ ಒಳ್ಳೆ ಸಂದೇಶ ರವಾನಿಸುವ ಕೆಲಸ ಮಾಡುತ್ತಿದೆ. ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದರೆ ಕಲೆ ಪೋಷಿಸಿ ಬೆಳೆಸಿದಂತೆ ಎಂದರು.ಬಸರಿಕಟ್ಟೆ ಶ್ರೀ ಸದ್ಗುರು ಪ್ರೌಡಶಾಲೆ ಪ್ರಾಂಶುಪಾಲ ರಜನೀಶ್ ಹೊಳ್ಳ ಮಾತನಾಡಿ, ಯಕ್ಷಗಾನ ಕಲೆಯಲ್ಲಿ ನಿಜವಾದ ಆಸಕ್ತಿ ಬೆಳೆಸಿಕೊಂಡ ಕಲಾವಿದರ ಪಾಲಿಗೆ ಪ್ರವೇಶ ದ್ವಾರ ಮಾತ್ರ ಇದ್ದು, ಹೊರ ಬರುವ ದಾರಿಯೇ ಇರುವುದಿಲ್ಲ, ಅಂದರೆ ನೈಜ ಕಲಾವಿದ ಒಮ್ಮೆ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡರೆ ದಿನದಿಂದ ದಿನಕ್ಕೆ ಆಸಕ್ತಿ ಬೆಳೆಯುತ್ತಾ ಕಲೆಯ ಆಸಕ್ತಿಯಿಂದ ಹೊರಬರುವ ಮಾರ್ಗೋಪಾಯ ಅವರಿಗೆ ಕಾಣಿಸದು. ಕಲಿತಷ್ಟು ಕಲಿಯಲು ಇರುವ ತಿಳಿದುಕೊಂಡಷ್ಟು ತಿಳಿದುಕೊಳ್ಳಲು ಇರಬೇಕೆನ್ನುನ ವಿಷಯಗಳು ಯಕ್ಷಗಾನ ಕಲೆಯಲ್ಲಿದೆ ಎಂದರು.
ಇದೇ ವೇಳೆ ಯಕ್ಷಗಾನ ಕಲಾವಿದರಾದ ಸದಾನಂದ ಹೆಬ್ಬಾರ್ ಹಾಗೂ ರಜನೀಶ್ ಹೊಳ್ಳರರನ್ನು ಸನ್ಮಾನಿಸಲಾಯಿತು. ರಾಜರುದ್ರಕೋಪ ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಅರಳುಕೊಡಿಗೆ ಸುಬ್ರಾಯ, ವೆಂಕಟೇಶ್ ಆಚಾರ್ಯ, ನರಸಿಂಹಮೂರ್ತಿ, ನವೀನ್, ರಮೇಶ್, ಸುರೇಶ್, ನಾಗರಾಜ್ ಮತ್ತಿತರರಿದ್ದರು. ಜನಾರ್ದನ ಮಂಡಗಾರು ಸ್ವಾಗತಿಸಿ, ನಿರೂಪಿಸಿದರು.