ಸಾರಾಂಶ
ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ದೇಶದ ರಾಷ್ಟ್ರಪತಿಯಾಗುವ ಮೂಲಕ ಅತ್ಯುತ್ತಮ ಸೇವೆ ಮಾಡಿದ್ದಾರೆ.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಜನ್ಮ ದಿನೋತ್ಸವ
ಕನ್ನಡಪ್ರಭ ವಾರ್ತೆ ಕನಕಗಿರಿ
ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ದೇಶದ ರಾಷ್ಟ್ರಪತಿಯಾಗುವ ಮೂಲಕ ಅತ್ಯುತ್ತಮ ಸೇವೆ ಮಾಡಿದ್ದಾರೆ ಎಂದು ಹಿರಿಯ ಶಿಕ್ಷಕ ಶಾಮೀದಸಾಬ ಲಯನ್ದಾರ ಹೇಳಿದರು.ಪಟ್ಟಣದ ೭ನೇ ವಾರ್ಡಿನಲ್ಲಿ ಹಮ್ಮಿಕೊಂಡಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಜನ್ಮ ದಿನೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಂಗಳವಾರ ಮಾತನಾಡಿದರು.
ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದಿದ್ದ ಕಲಾಂ ಅವರು ೨೦೦೨ರಿಂದ ೨೦೦೭ರ ವರೆಗೆ ರಾಷ್ಟ್ರಪತಿಯಾಗಿ ಸೇವೆಗೈದಿದ್ದಾರೆ. ಸರಳತೆ, ಪ್ರಾಮಾಣಿಕತೆ ಹಾಗೂ ಮೇಧಾವಿತನ ರಾಷ್ಟ್ರಪತಿಯ ಘನತೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬ್ರಹ್ಮಚಾರಿಯಾದ ಕಲಾಂ ಅವರಿಗೆ ಚಿಕ್ಕಮಕ್ಕಳೆಂದರೆ ಬಲು ಪ್ರೀತಿ. ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ನೀಡುವುದನ್ನು ರೂಢಿಸಿಕೊಂಡಿದ್ದರು. ಇಂತಹ ಸರಳಜೀವಿಗೆ ಭಾರತ ಸರ್ಕಾರದಿಂದ ಪದ್ಮಭೂಷಣ, ಭಾರತರತ್ನ, ಪದ್ಮ ವಿಭೂಷಣ ಸೇರಿದಂತೆ ನಾನಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.ಅಲ್ಲದೇ ಸ್ಥಳೀಯ ಸೈಕಲ್ ವ್ಯಾಪಾರಿ ಹುಸೇನಭಾಷ ಗಸ್ತಿ ಅನೇಕ ವರ್ಷಗಳಿಂದ ಕಲಾಂ ಅವರ ಜಯಂತಿಆಚರಿಸುತ್ತಾ ಬಂದಿದ್ದಾರೆ. ಪ್ರತಿ ವರ್ಷ ಕಲಾಂ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ ಎಂದರು.
ಮುಸ್ಲಿಂ ಸಮಾಜದ ಗುರುಗಳಿಗೆ, ಸಮಾಜ ಸೇವಕರಿಗೆ ಹಾಗೂ ಅಕ್ಷರ ಕಲಿಸಿದ ಗುರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭ ವಾಗೀಶ ಹಿರೇಮಠ, ವೈ.ಎಂ. ದೇವರಾಜ್, ಚಾಂದಪಾಷ, ಪಾಷಸಾಬ ಮಕಾಂದಾರ, ಶಾಮೀದಸಾಬ ಬೀಡಿ, ಪೀರ ಅಹ್ಮದ್ ಬೀಡಿ, ಬಾಷಸಾಬ ಸಿಕ್ಲಗಾರ, ಸಯ್ಯೇದ್ ಖಾಜಾಹುಸೇನ ಸೇರಿದಂತೆ ಇತರರಿದ್ದರು.