ಕಲಾ ತಂಡಗಳಿಂದ ಮೂಲ ಜನಪದ ಕಲೆಗಳ ಉಳಿವು

| Published : Nov 20 2024, 12:33 AM IST

ಕಲಾ ತಂಡಗಳಿಂದ ಮೂಲ ಜನಪದ ಕಲೆಗಳ ಉಳಿವು
Share this Article
  • FB
  • TW
  • Linkdin
  • Email

ಸಾರಾಂಶ

ಕಲೆ ಕಲಾವಿದರ ಬದುಕನ್ನು ಮತ್ತು ಸಮಾಜದ ಏರುಪೇರು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ಮುಂಡರಗಿ: ಜಿಲ್ಲೆ ಸೇರಿದಂತೆ ನಾಡಿನಾದ್ಯಂತ ಇರುವ ಹೆಸರಾಂತ ಕಲಾ ತಂಡಗಳಿಂದ ನಮ್ಮ ಮೂಲ ಜನಪದ ಸಂಸ್ಕೃತಿಯೂ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳು ಉಳಿಯುತ್ತಿವೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ಅವರು ಇತ್ತೀಚೆಗೆ ತಾಲೂಕಿನ ಡೋಣಿ ಗ್ರಾಮದಲ್ಲಿ ಸಂಗೀತ ನೃತ್ಯ ನಾಟಕ ಸಹನಾ ಸಂಸ್ಥೆ ಡೋಣಿ ಮತ್ತು ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ ಸಮುದಾಯ ಭವನದಲ್ಲಿ ಜರುಗಿದ ಕಲಾ ಸಂಭ್ರಮ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂತಹ ಕಾರ್ಯಕ್ರಮಗಳು ಅನೇಕ ಕಲಾವಿದರ ಬದುಕಿಗೆ ಮತ್ತು ಕಲಾವಿದರನ್ನು ಗುರುತಿಸುವುದಕ್ಕೆ ನೆರವಾಗುತ್ತವೆ. ಹೊಸ ಹೊಸ ಕಲಾವಿದರನ್ನು ಗುರುತಿಸುವುದು ನಿರಂತರವಾಗಿ ನಡೆಯಬೇಕಾಗಿದೆ ಎಂದರು.

ರೋಣ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಿಥುನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ ಕಲಾವಿದರ ಬದುಕನ್ನು ಮತ್ತು ಸಮಾಜದ ಏರುಪೇರು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆ ಇದ್ದೇ ಇರುತ್ತದೆ.ಅದನ್ನು ಪ್ರದರ್ಶಿಸಲು ಒಂದು ಒಳ್ಳೆಯ ವೇದಿಕೆಯ ಅವಶ್ಯಕತೆ ಇರುತ್ತದೆ.ಇಂತಹ ಸಂಸ್ಥೆಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡುವುದರಿಂದ ಕಲಾವಿದರಿಗೆ ಆಸರೆಯಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಡೋಣಿ ಗ್ರಾಪಂ ಅಧ್ಯಕ್ಷ ಲತಾ ಮಲ್ಲಿಕಾರ್ಜುನ ಕುಂಬಾರ, ಬಸವರಾಜ ಕಡೆಮನಿ, ಆನಂದ ಸಿಂಗಾಡಿ, ಸಂಜಯ ದೊಡ್ಡಮನಿ, ಮಂಗಳಾ ಇಟಗಿ, ಕಾಶಪ್ಪ ಅಳವಂಡಿ, ಪ್ರಕಾಶ ಒಲಿ ಅಲ್ಲಾಸಾಬ್ ದೊಡ್ಡಮನಿ, ಭರಮಗೌಡ ಪಾಟೀಲ, ಹುಲಿಗೆಮ್ಮ ಜೊಂಡಿ, ಮಲ್ಲೇಶ ಹೊಸಮನಿ, ಎಲ್ಲಪ್ಪ ಚಲವಾದಿ, ಸತ್ಯಪ್ಪ ಚಲವಾದಿ ಉಪಸ್ಥಿತರಿದ್ದರು.

ಬೀರಲಿಂಗೇಶ್ವರ ಕಲಾತಂಡ ಡೋಣಿ, ದಲಿತಕಲಾ ಮಂಡಳಿ ಗದಗ, ವಿಜಯ ಮೆಲೋಡಿಸ ಕಲಾತಂಡ ಡೋಣಿ ಇವರಿಂದ ಕಾರ್ಯಕ್ರಮಗಳು ಜರುಗಿದವು. ಅನ್ಮೋಲ್ ಯೋಗ ಕೇಂದ್ರ ಮುಂಡರಗಿ ಇವರಿಂದ ಯೋಗ ಪ್ರದರ್ಶನ ಜರುಗಿತು. ನಂತರ ಸಾಹಿತಿ ಡಾ. ನಿಂಗು ಸೊಲಗಿ ರಚನೆಯ ದಾಂಪತ್ಯ ಗೀತ ನಾಟಕ ಪ್ರದರ್ಶನಗೊಂಡಿತು.