ಪೊಲೀಸ್‌ ಕರ್ತವ್ಯದ ಜೊತೆಗೆ ಕಲಾಆರಾಧನೆ ಶ್ಲಾಘನೀಯ: ಹಂಸಲೇಖ

| Published : Aug 10 2024, 01:37 AM IST

ಸಾರಾಂಶ

ಒತ್ತಡದ ಕರ್ತವ್ಯದ ನಡುವೆಯೂ ಕಲಾ ಸೇವೆ ಮೈಗೂಡಿಸಿಕೊಂಡಿರುವ ಪೊಲೀಸ್‌ ಕಲಾ ಆರಾಧನಾ ಕಾರ್ಯ ಶ್ಲಾಘನೀಯ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಡಾ। ಹಂಸಲೇಖ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒತ್ತಡದ ಕರ್ತವ್ಯದ ನಡುವೆಯೂ ಕಲಾ ಸೇವೆ ಮೈಗೂಡಿಸಿಕೊಂಡಿರುವ ಪೊಲೀಸ್‌ ಕಲಾ ಆರಾಧನಾ ಕಾರ್ಯ ಶ್ಲಾಘನೀಯ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಡಾ। ಹಂಸಲೇಖ ಹೇಳಿದರು.

ನಬಿರೋಶನ್ ಪ್ರಕಾಶನ, ಬೋರಗಿ ವತಿಯಿಂದ ಕೋರಮಂಗಲದ ಕೆಎಸ್ಆರ್‌ಪಿ 4ನೇ ಬೆಟಾಲಿಯನ್‌ನಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಕಲಾ ಸಂಗಮ, ಆರಕ್ಷಕ ಕಲಾ ರತ್ನ ಪುರಸ್ಕಾರ ಹಾಗೂ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಲೆ, ಸಾಹಿತ್ಯ, ಸಂಗೀತ ಸಮಾಜದಲ್ಲಿ ಭಾವೈಕ್ಯತೆ ಬೆಸೆಯುವ ಕೊಂಡಿಗಳು. ಇಂಥ ಕಲಾ ಸೇವೆಯನ್ನು ಆರಕ್ಷಕರು ಮಾಡುತ್ತಿರುವುದು ಪ್ರಶಂಸನೀಯ. ಪೊಲೀಸ್ ಇಲಾಖೆ ಎಂದರೆ ಎಲ್ಲರಿಗೂ ಭಯ, ಆದರೆ ಅವರಿಂದಲೇ ಗೌರವ ಪಡೆದುಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಕಮಾಂಡೆಂಟ್ ಹಂಜಾ ಹುಸೇನ್‌ ಅಧ್ಯಕ್ಷತೆ ವಹಿಸಿದ್ದರು. ಎಸಿಪಿ ಉಮಾರಾಣಿ, ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್, ಇನ್‌ಸ್ಪೆಕ್ಟರ್‌ಗಳಾದ ಕೆ.ವಿಶ್ವನಾಥ, ಜ್ಯೋತಿರ್ಲಿಂಗ ಹೊನಕಟ್ಟಿ ಉಪಸ್ಥಿತರಿದ್ದರು.

ಇದೇ ವೇಳೆ ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ ಎನ್.ಎಂ.ಬಿರಾದಾರ ಅವರಿಗೆ ದಿ.ಖತಾಲಸಾಬ ಆಲಗೂರ ಸ್ಮರಣಾರ್ಥವಾಗಿ ಅಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ, ಯಕ್ಷಗಾನ, ಭರತನಾಟ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಲಾವಿದರಿಗೆ ಆರಕ್ಷಕ ಕಲಾರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.