ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಬದಲಾವಣೆಯಾಗಿರುವ ಜೀವನ ಶೈಲಿ ಹಾಗೂ ಸೇವಿಸುವ ಆಹಾರ ಪದ್ಧತಿಯಿಂದಾಗಿ ಸಂಧಿವಾತದಂತಹ ಕೀಲುನೋವು ಸಮಸ್ಯೆ ಹೆಚ್ಚು ಜನರನ್ನು ಕಾಡುತ್ತಿದೆ ಎಂದು ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದ ಸಹಾಯಕ ನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಡಾ.ಎಚ್.ಎಸ್.ವಾದಿರಾಜ್ ತಿಳಿಸಿದರು.ತಾಲೂಕಿನ ಎಂ.ಹೊಸೂರು ಗೇಟ್ ಬಳಿಯಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಪರಿಷತ್‌ನಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಸಂಧಿವಾತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮನುಷ್ಯರಿಗೆ ಬರುವ ಅನೇಕ ಕಾಯಿಲೆಗಳಿಂದ ಉಂಟಾಗಬಹುದಾದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿ ಅದನ್ನು ತಡೆಗಟ್ಟುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನ ಎಲ್ಲಾ ದೇಶಗಳ ಸಮಸ್ಯೆಗಳನ್ನು ಸೇರಿಸಿ ಅದಕ್ಕೆ ತಕ್ಕಂತೆ ಒಂದೊಂದು ದಿನವನ್ನು ಆಚರಣೆಗೆ ತಂದಿದೆ. ಅದರಂತೆ ಈ ವರ್ಷ ನಿಮ್ಮ ಕನಸನ್ನು ಪೂರ್ಣಗೊಳಿಸಿ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಸಂಧಿವಾತ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.ಈ ಹಿಂದೆ 50 ವರ್ಷ ಮೇಲ್ಪಟ್ಟವರಲ್ಲಿ ಸಂಧಿವಾತ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ 30 ವರ್ಷ ವಯೋಮಾನದ ಜನರಲ್ಲಿಯೂ ಇಂತಹ ಸಮಸ್ಯೆ ಉದ್ಭವಿಸಲು ಯೋಗ ಮತ್ತು ವ್ಯಾಯಾಮ ಮಾಡುವುದನ್ನು ಕಡಿಮೆ ಮಾಡಿ ತಿನ್ನುವ ಆಹಾರ ಪದಾರ್ಥಗಳನ್ನು ಹೆಚ್ಚು ಮಾಡಿಕೊಂಡಿರುವುದು ಮುಖ್ಯ ಕಾರಣ ಎಂದರು.
ಒಬ್ಬ ವ್ಯಕ್ತಿಗೆ ಸಂಧಿವಾತ ಶುರುವಾಯಿತೆಂದರೆ ಅದಕ್ಕೆ ಯಾವ ಚಿಕಿತ್ಸೆಯೂ ಇಲ್ಲ. ಹಾಗಾಗಿ ದೇಹದ ಯಾವುದೇ ಭಾಗದ ಕೀಲು ದುರ್ಬಲವಾಗದಂತೆ ನೋಡಿಕೊಳ್ಳಬೇಕಿರುವುದು ಪ್ರತಿಯೊಬ್ಬರ ಜವಾಬ್ದಾರಿ. ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮೂಲಕ ಸಂಧಿವಾತ ತಡೆಗಟ್ಟಬಹುದೇ ವಿನಹಃ ಈ ರೋಗಕ್ಕೆ ಮತ್ಯಾವುದೇ ಚಿಕಿತ್ಸೆ ಇಲ್ಲ. ಪ್ರತಿನಿತ್ಯ ಯೋಗಾಭ್ಯಾಸದ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ಸಂಸ್ಥೆ ಸಂಶೋಧಕರಾದ ಡಾ.ಪಿ.ಎಸ್.ಸ್ವಾತಿ, ಡಾ.ಎಂ.ಕೆ.ನಿತೀಶ್ ಹಾಗೂ ಡಾ.ಇನ್ಬರಾಜ್ ಸಂಧಿವಾತ ಸಮಸ್ಯೆ ತಡೆಗಟ್ಟುವ ಕುರಿತು ಅಗತ್ಯ ಮಾಹಿತಿ ನೀಡಿದರು. ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ, ಫಿಜಿಯೋ ತೆರಪಿಸ್ಟ್ ರಮ್ಯ, ನ್ಯಾಚುರೋಪತಿ ಥೆರಪಿಸ್ಟ್‌ಗಳಾದ ಶ್ರೀಧರ್, ಬಾಲಕೃಷ್ಣ, ಕಾವ್ಯಶ್ರೀ, ಡಾ.ಸಿಂಧುಶ್ರೀ, ಕಾವ್ಯ, ಡಾ.ಕಾರ್ತಿಕ್, ಡಾ.ರಘುರಾಂ, ಕಚೇರಿ ಸಹಾಯಕರಾದ ಚೈತ್ರ, ಪ್ರಗತಿ, ಎಂಟಿಎ ಶಿವರಾಜು, ಯಶವಂತ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಮತ್ತು ಸ್ಥಳೀಯ ಜನರು ಇದ್ದರು.