ಕಲಂ 371 ಜೆ ಮೀಸಲು ಬಗ್ಗೆ ದಕ್ಷಿಣದ ಬುದ್ಧಿಜೀವಿಗಳಿಂದ ಅಪಸ್ವರ

| Published : May 25 2024, 12:50 AM IST

ಸಾರಾಂಶ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ವಿರೋಧಿ ಕೆಲವು ಬುದ್ಧಿಜೀವಿಗಳು ವಕ್ರ ದೃಷ್ಟಿಯಲ್ಲಿ ನೋಡುವ ಮೂಲಕ ನಮ್ಮ ಪಾಲಿನ ಹಕ್ಕಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತ, ಹಕ್ಕಿನ ವಿಶೇಷ ಸ್ಥಾನಮಾನಕ್ಕೆ ಚ್ಯುತಿ ತರಲು ರಾಜ್ಯಪಾಲರಿಗೆ ದೂರು ನೀಡುವ ನಿರ್ಣಯ ಬೆಂಗಳೂರಿನಲ್ಲಿ ಸಭೆ ನಡೆಸಿ ತೆಗೆದುಕೊಂಡಿರುವುದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಲವಾಗಿ ಖಂಡಿಸುತ್ತದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಳೆದ ಒಂದು ದಶಕದಿಂದ ಜಾರಿಗೆ ಬಂದಿರುವ ಸಂವಿಧಾನದ 371ನೇ ಜೇ ಕಲಂ ಬಗ್ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ವಿರೋಧಿ ಕೆಲವು ಬುದ್ಧಿಜೀವಿಗಳು ವಕ್ರ ದೃಷ್ಟಿಯಲ್ಲಿ ನೋಡುವ ಮೂಲಕ ನಮ್ಮ ಪಾಲಿನ ಹಕ್ಕಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತ, ಹಕ್ಕಿನ ವಿಶೇಷ ಸ್ಥಾನಮಾನಕ್ಕೆ ಚ್ಯುತಿ ತರಲು ರಾಜ್ಯಪಾಲರಿಗೆ ದೂರು ನೀಡುವ ನಿರ್ಣಯ ಬೆಂಗಳೂರಿನಲ್ಲಿ ಸಭೆ ನಡೆಸಿ ತೆಗೆದುಕೊಂಡಿರುವುದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.

ವಿಶಾಲ ಮೈಸೂರು ರಾಜ್ಯದಲ್ಲಿ ಸೇರಿದ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶ ಇಡೀ ರಾಜ್ಯದಲ್ಲಿ ಸರ್ಕಾರಿ ಸೇವೆಗಳಲ್ಲಿ 1956ರಿಂದ 1987ರ ವರೆಗೆ ಸರ್ಕಾರದ ಆಯಾ ಇಲಾಖೆಗಳಲ್ಲಿ ಶೇ.18ರಷ್ಷು ಇರಬೇಕಾದ ನಮ್ಮ ಪ್ರತಿನಿಧಿತ್ವ ಕೇವಲ ಶೇ.4ರಷ್ಷು ಮಾತ್ರ ಮತ್ತು ವಿಧಾನ ಮಂಡಲದ ಕಚೇರಿಗಳಲ್ಲಿ ಕೇವಲ ಶೇ1.5ರಷ್ಟು ಮಾತ್ರ ಇತ್ತು. ಆಗ ಬೆಂಗಳೂರಿನ ಕೆಲವು ಕಲ್ಯಾಣ ಕರ್ನಾಟಕ ವಿರೋಧಿ ಬುದ್ಧಿಜೀವಿಗಳಿಗೆ ನಮ್ಮ ಬಗ್ಗೆ ಕನಿಷ್ಠ ಕಾಳಜಿ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

2013ರ ವರೆಗೂ ರಾಜ್ಯದ ಒಟ್ಟು ಸರ್ಕಾರಿ ನೌಕರಿಗಳಲ್ಲಿ ಶೇ.19ರಷ್ಟು ಇರಬೇಕಾದ ನಮ್ಮ ಪಾಲು ಕೇವಲ ಶೇ.9ರಷ್ಷು ಇದ್ದು, ಈಗ ಸಂವಿಧಾನದ ವಿಶೇಷ ಸ್ಥಾನಮಾನ ಪಡೆದ ನಂತರವು ಸಹ ನಮ್ಮ ಪ್ರದೇಶದ ಜನಸಂಖ್ಯೆಗೆ ಅನುಗುಣವಾಗಿ ಇನ್ನು ನಮ್ಮ ‌ಹಕ್ಕಿನ ಪಾಲು ನಾವು ಪಡೆದಿಲ್ಲ ಇಷ್ಟಾದರೂ ಬೆಂಗಳೂರಿನ ಕಲ್ಯಾಣ ವಿರೋಧಿ ಕೆಲವು ಬುದ್ಧಿಜೀವಿಗಳು ವಿಶೇಷ ಸ್ಥಾನಮಾನದ ಬಗ್ಗೆ ಹೊಟ್ಟೆಕಿಚ್ಚಿನ ದೃಷ್ಟಿಯಿಂದ ನೋಡುವುದು ಯಾವ ನ್ಯಾಯ?

ಕರ್ನಾಟಕದ ಸಮಸ್ತ ಕನ್ನಡಿಗರೂ ಸಹೋದರರಂತೆ ಎಂದು ಹಿತವಚನ ನೀಡುವ ಅಭಿವೃದ್ಧಿ ವಿರೋಧಿ ಬುದ್ಧಿಜೀವಿಗಳು ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಆಶಾಕಿರಣವಾದ ಸಂವಿಧಾನದ 371ನೇ ಜೆ ಕಲಂ ತಿದ್ದುಪಡಿಯಿಂದ ಕಲ್ಯಾಣದ ಅಭ್ಯರ್ಥಿಗಳೆ ರಾಜ್ಯದ ಬಹುಪಾಲು ಹುದ್ದೆಗಳು ಕಬಳಿಸುತ್ತಿದ್ದಾರೆ ಇದರಿಂದ ರಾಜ್ಯದ ಇಪ್ಪತ್ನಾಲ್ಕು ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ರಾಜ್ಯದ ಜನಮಾನಸದಲ್ಲಿ ತಪ್ಪು ಸಂದೇಶ ನೀಡುತ್ತಿರುವುದು ನೋಡಿದರೆ ಇವರಿಗೆ ಅಖಂಡ ಕರ್ನಾಟಕದ ಬಗ್ಗೆ ಮತ್ತು ಪ್ರಾದೇಶಿಕ ಅಸಮಾನತೆಯ ನಿವಾರಣೆ ಬಗ್ಗೆ ಕಿಂಚಿತ್ತವಾದರು ಅಭಿಮಾನ ಇಲ್ಲದಿರುವುದು ಎದ್ದು ಕಾಣುತ್ತಿದೆ.

ನಿರಂತರವಾಗಿ ನಮ್ಮ ಪ್ರದೇಶಕ್ಕೆ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಆಗುತ್ತಿದೆ.ಹೀಗಿರುವಾಗ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿರೋಧಿ ಮನೋಭಾವದ ಕ್ಷುಲ್ಲಕ ಮನಸಿನ ಕೆಲವು ಬುದ್ಧಿಜೀವಿಗಳಿಗೆ ಅಖಂಡ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕದ ರಚನಾತ್ಮಕ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸಮಾನತೆಯ ನಿವಾರಣೆ ಆಗುವುದು ಬೇಕಾಗಿಲ್ಲವೆ? ಕಲ್ಯಾಣ ಕರ್ನಾಟಕ ಅಖಂಡ ಕರ್ನಾಟಕದ ಭಾಗ ಅಲ್ಲವೇ ಎಂಬ ಪ್ರಶ್ನೆಗಳು ಉದ್ಭವವಾಗುತ್ತವೆ.

ಇಂತಹ ಕೀಳು ಮಟ್ಟದ ಬುದ್ಧಿಜೀವಿಗಳ ರಾಜ್ಯ ಒಡೆಯುವ ಕ್ಷುಲ್ಲಕ ನೀತಿಯ ಬಗ್ಗೆ ಕಲ್ಯಾಣ ಕರ್ನಾಟಕದ ಜನಮಾನಸ ಸಹಿಸುವದಿಲ್ಲ ಈ ಬಗ್ಗೆ ಗಂಭೀರವಾಗಿ ಪರಿಗಣಿಸುವದಲ್ಲದೆ ನಮ್ಮ ಪ್ರದೇಶದ ಅಭಿವೃದ್ಧಿಯ ಹಾಗೂ ನಮ್ಮ ಹಕ್ಕಿನ ಸಂವಿಧಾನದ 371ನೇ ಜೆ ಕಲಂ ವಿಶೇಷ ಸ್ಥಾನಮಾನದ ಬಗ್ಗೆ ಕೆಣಕಿದರೆ ನಾವು ಸುಮ್ಮನೆ ಕೊಡುವವರಲ್ಲ ಎಂದು ದಸ್ತಿ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಮತ್ತು ರಾಜ್ಯಪಾಲರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ನಮ್ಮ ಅಸ್ತಿತ್ವಕ್ಕೆ ದಕ್ಕೆ ಬರದಂತೆ ನೋಡಿಕೊಳ್ಳಬೇಕು. ಈ ಗಂಭೀರ ವಿಷಯದ ಬಗ್ಗೆ ಚರ್ಚಿಸಲು ಮತ್ತು ಸಂವಿಧಾನ ಬದ್ಧ ನಮ್ಮ ಹಕ್ಕಿನ ರಕ್ಷಣೆ ಕುರಿತು ಬರುವ ಮೇ 26ರಂದು ಬೆಳಗ್ಗೆ 11ಗಂಟೆಗೆ ಕಲ್ಯಾಣ ಕರ್ನಾಟಕದ ಚಿಂತಕರ, ಬುದ್ಧಿಜೀವಿಗಳ, ಅಭಿವೃದ್ಧಿಪರ ಹೋರಾಟಗಾರರ ದುಂಡು ಮೇಜಿನ ಸಭೆಯನ್ನು ಕಲಬುರಗಿಯ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ನಿಯೋಜಿಸಲಾಗಿದೆ ಎಂದೂ ಲಕ್ಷ್ಮಣ ದಸ್ತಿ ಹೇಳಿದ್ದಾರೆ.