ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕೃತಕ ನೆರೆ ಉಂಟಾಗಿದೆ. ನಗರದ ಬಹುತೇಕ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು, ಜನ- ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಅಕ್ಕಪಕ್ಕದ ಅಂಗಡಿಗಳು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.ಉಡುಪಿ ನಗರದ ಮಧ್ಯೆ ಹರಿಯುವ ಇಂದ್ರಾಣಿ ಹೊಳೆ (ಕಲ್ಸಂಕ ತೋಡು) ಹೂಳು ತುಂಬಿದ್ದರಿಂದ ಸಣ್ಣ ಮಳೆಗೂ ನೀರು ಉಕ್ಕಿ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿವೆ. ಇಲ್ಲಿನ ಬೈಲಕರೆ, ಮಠದಬೆಟ್ಟು, ಕಲ್ಸಂಕ, ಗುಂಡಿಬೈಲು ಪ್ರದೇಶದ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ.
ನಗರವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಿಂತ ಅಕ್ಕಪಕ್ಕದ ಕೂಡು ರಸ್ತೆಗಳು ತಗ್ಗಾಗಿರುವುದರಿಂದ, ಈ ರಸ್ತೆಗಳಲ್ಲಿ ಕೃತಕ ನೆರೆ ಸಂಭವಿಸಿದೆ. ಈ ಮುಖ್ಯ ರಸ್ತೆಗಳಲ್ಲಿಯೂ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದರಿಂದ ಅನೇಕ ಹೊಟೇಲು, ಲಾಡ್ಜುಗಳ ಬೇಸ್ ಮೆಂಟ್‌ಗಳಿಗೂ ನೀರು ನುಗ್ಗಿದೆ.ಪ್ರತಿವರ್ಷದಂತೆ ಕೃಷ್ಣಮಠದ ಪಾರ್ಕಿಂಗ್ ಪ್ರದೇಶ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆರೆಯಂತಾಗಿತ್ತು. ಕಲ್ಸಂಕ ತೋಡಿನ ಪರಿಸರದಲ್ಲಿರುವ ಅನೇಕ ಮನೆಗಳು ಜಲಾವೃತಗೊಂಡಿದ್ದವು. ಇಲ್ಲಿನ ಮೂರು ಮನೆಯ ಜನರನ್ನು, ಹಿರಿಯರನ್ನು ಅಗ್ನಿಶಾಮಕ ಸಿಬ್ಬಂದಿ ಸಂಬಂಧಿಕರ ಮನೆಗೆ ಸ್ಥಳಾಂತರಿಸಿದ್ದಾರೆ. ಗುರುವಾರ ಸ್ವಲ್ಪ ಮಳೆ ಕಡಿಯಾದ್ದರಿಂದ ನೀರು ಹಿಮ್ಮುಖವಾಗಿದೆ.
* ದೈವಸ್ಥಾನಕ್ಕೆ ಜಲಾವರಣನಗರದ ಹೊರಭಾಗದಲ್ಲಿರುವ ಮೂಡನಿಡಂಬೂರು ಗ್ರಾಮದಲ್ಲಿಯೂ ಕೃತಕ ನೆರೆ ಸೃಷ್ಟಿಯಾಗಿದೆ. ತಗ್ಗು ಗದ್ದೆಗಳ ಈ ಪ್ರದೇಶದಲ್ಲಿ ಮಣ್ಣುತುಂಬಿಸಿ ಮನೆಗಳನ್ನು ಕಟ್ಟಲಾಗಿದ್ದು, ನೀರು ಹರಿಯದೇ ಅನೇಕ ಮನೆಗಳು ಜಲಾವೃತವಾಗಿವೆ. ಇಲ್ಲಿನ ಗರಡಿಯ ಆವರಣಕ್ಕೂ ನೀರು ನುಗ್ಗಿದೆ. ಅಕ್ಕಪಕ್ಕದ ರಸ್ತೆಗಳಲ್ಲಿ ನೀರು ಉಕ್ಕಿಹರಿಯುತ್ತಿದೆ. ಇದರಿಂದ ಸ್ಥಳೀಯ ಶಾಲಾಕಾಲೇಜು ಮಕ್ಕಳಿಗೆ, ಜನರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಅವೈಜ್ಞಾನಿಕ ನಗರ ಯೋಜನೆ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
* ಪಂದುಬೆಟ್ಟು ರಸ್ತೆ ಮೇಲೆ ಮರಮಲ್ಪೆಗೆ ತೆರಳುವ ರಸ್ತೆಯ ಪಂದುಬೆಟ್ಟು ಎಂಬಲ್ಲಿ ಬುಧವಾರ ರಾತ್ರಿ ಭಾರಿ ಮರವೊಂದು ಉರುಳಿಬಿದ್ದಿದೆ. ಅದೃಷ್ಟವಶಾತ್ ಮರ ಉರುಳಿ ರಸ್ತೆಗೆ ಬಿದ್ದಿರುವುದರಿಂದ ಅಕ್ಕಪಕ್ಕದ ಮನೆಗಳಿಗೆ, ಮನೆಯಲ್ಲಿದ್ದವರಿಗೆ ಯಾವುದೇ ಕಷ್ಟನಷ್ಟವಾಗಿಲ್ಲ.
ಗುರುವಾರ ಬೆಳಗ್ಗೆ ಕೆಲಕಾಲ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಯಿತು. ನಂತರ ನಗರಸಭೆಯ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.