ಸಾರಾಂಶ
ತಂತ್ರಜ್ಞಾನ ನಮ್ಮ ಜೀವನದ ಭಾಗವಾಗಿದ್ದು, ಎಐ ಅದರ ಹೊಸ ಆಯಾಮವಾಗಿದೆ. ಕೃತಕ ಬುದ್ಧಿಮತ್ತೆ ಜ್ಞಾನಾಭಿವೃದ್ಧಿಗೆ ಪೂರಕ ಎಂದು ವಿದ್ಯಾಗಿರಿಯ ಬಸವೇಶ್ವರ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಬಿ.ಆರ್ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತಂತ್ರಜ್ಞಾನ ನಮ್ಮ ಜೀವನದ ಭಾಗವಾಗಿದ್ದು, ಎಐ ಅದರ ಹೊಸ ಆಯಾಮವಾಗಿದೆ. ಕೃತಕ ಬುದ್ಧಿಮತ್ತೆ ಜ್ಞಾನಾಭಿವೃದ್ಧಿಗೆ ಪೂರಕ ಎಂದು ವಿದ್ಯಾಗಿರಿಯ ಬಸವೇಶ್ವರ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಬಿ.ಆರ್ ಪಾಟೀಲ ಹೇಳಿದರು.ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಿತಿಯ ಸಹಯೋಗದಲ್ಲಿ ಹಾಗೂ ಮಹಾವಿದ್ಯಾಲಯದ ಸಂಸ್ಥಾಪಕ ಪ್ರಾಚಾರ್ಯ ಡಾ.ಶಿ.ಚ. ನಂದಿಮಠ ಅವರ ಸ್ಮರಣಾರ್ಥ ವಿವಿ ಮಟ್ಟದ ಅಂತರ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಉದ್ಯೋಗ ಸೃಷ್ಟಿಗೆ ಅಡೆತಡೆ ವಿಷಯ ಕುರಿತು ಚರ್ಚಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಎಐ ಆಗಮನದಿಂದ ಪರ ವಿರೋಧ ಚರ್ಚೆಗಳು ಹೆಚ್ಚಾಗಿದ್ದು, ತಿಳಿವಳಿಕೆ ಆಧಾರದ ಮೇಲೆ ತಂತ್ರಜ್ಞಾನ ಬಳಕೆಯಾಗುತ್ತದೆ. ಕಂಪ್ಯೂಟರ್ ಆವಿಷ್ಕಾರದ ಸಂದರ್ಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಗಳು ನಶಿಸಿ ಹೋಗುತ್ತವೆ ಎಂಬ ಚರ್ವೆಗಳು ಹುಟ್ಟಿಕೊಂಡಿದ್ದವು. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಕಂಪ್ಯೂಟರ್ ಸಾಕಷ್ಟು ಕೆಲಸ ಸೃಷ್ಟಿ ಮಾಡಿತು. ತಂತ್ರಜ್ಞಾನದಿಂದ ಆರ್ಥಿಕ ನಷ್ಟ ಉಂಟಾಗುವುದಿಲ್ಲ. ಮುಂದೊಂದು ದಿನ ಕೃತಕ ಬುದ್ಧಿಮತ್ತೆಯೂ ವರದಾನವಾಗಲಿದೆ. ಕಲಾ ಮಾಹಾವಿದ್ಯಾಲಯದಲ್ಲಿ ಸುಮಾರು 25 ವರ್ಷದಿಂದ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ಪ್ರತಿ ವರ್ಷವೂ ಆಯ್ಕೆ ಮಾಡಿದ ವಿಷಯ ವಿಶಿಷ್ಟವಾಗಿರುತ್ತದೆ. ಇದು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಸಹಾಯಕ ಎಂದು ಹೇಳಿದರು.ಪ್ರಾಚಾರ್ಯರಾದ ಎಸ್.ಆರ್. ಮುಗನೂರಮಠ ಮಾತನಾಡಿ, ಚರ್ಚಾ ಸ್ಪರ್ಧೆಯಿಂದ ವಿದ್ಯಾರ್ಥಿಗಳಲ್ಲಿನ ವಿವೇಚನಾ ಶಕ್ತಿ, ವಿಷಯ ಸಂಶೋಧನಾ ಕೌಶಲ್ಯ, ಮಂಡಿಸುವ ಸಾಮರ್ಥ್ಯ ಶೋಧಿಸಲು ಸಾಧ್ಯ. ಸ್ಪರ್ಧೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಕೃತಕ ಬುದ್ದಿಮತ್ತೆಯ ಆಗಮನದಿಂದ ನೈಜ ಬುದ್ಧಿಮತ್ತೆಗೆ ಯಾವುದೇ ಧಕ್ಕೆಯಾಗದು. ಪ್ರತಿವರ್ಷ ಹೊಸ ವಿಚಾರಗಳ ಚರ್ಚಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಲೇ ಬರಲಾಗುತ್ತಿದ್ದು, ನೈಜ ಬುದ್ಧಿಶಕ್ತಿ ಹುಡುಕುವ ವೇದಿಕೆ ಇದಾಗಿದೆ ಎಂದು ಹೇಳಿದರು.
ಕನ್ನಡ ಪ್ರಾಧ್ಯಾಪಕ ಡಾ.ವಿರೂಪಾಕ್ಷ ಎನ್.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಸಂಯೋಜಕರಾದ ಡಾ.ಕೆ.ವಿ. ಮಠ, ಕಾರ್ಯಕ್ರಮ ಸಂಯೋಜಕರಾದ ಡಾ.ಎಸ್.ಡಿ. ಕೆಂಗಲಗುತ್ತಿ ಸೇರಿದಂತೆ ವಿವಿಧ ಪ್ರಾಧ್ಯಾಪಕರು, ಮಹಾವಿದ್ಯಾಲಯಗಳಿಂದ ಆಗಮಿಸಿದ ಚರ್ಚಾ ಸ್ಪರ್ಧಿಗಳು ಉಪಸ್ಥಿತರಿದ್ದರು.ಚರ್ಚಾ ಸ್ಪರ್ಧೆ ವಿಜೇತರು:
ಚರ್ಚಾ ಸ್ಪರ್ಧೆಯಲ್ಲಿ ಬೀಳಗಿಯ ಆರ್.ಪಿ. ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ ಸರ್ವರಿ ಪ್ರಥಮ, ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಮಯರಾಜ ಆರ್.ಟಿ. ದ್ವಿತೀಯ, ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದ ಸುಮಾ ತೊಳನೂರ ತೃತೀಯ ಸ್ಥಾನ ಪಡೆದುಕೊಂಡರು. ಚರ್ಚಾ ಸ್ಪರ್ಧೆಯಲ್ಲಿ 11 ಮಹಾವಿದ್ಯಾಲಯಗಳಿಂದ 23 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯ ನಿರ್ಣಾಯಕರಾಗಿ ಡಾ.ವಿನಾಯಕ ಹೆಗಡೆ, ಸಹ ಪ್ರಾಧ್ಯಾಪಕ ಸಂತೋಷ ಕುಮಾರ, ಡಾ.ಎಸ್.ಎಸ್. ಭೂಮನ್ನವರ ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))