ಕೃತಕ ಬುದ್ಧಿಮತ್ತೆ ಜೀವನದ ಅವಿಭಾಜ್ಯ ಅಂಗ: ಬಿಷಪ್‌ ಜೆರಾಲ್ಡ್‌ ಲೋಬೊ

| Published : Mar 13 2025, 12:53 AM IST

ಕೃತಕ ಬುದ್ಧಿಮತ್ತೆ ಜೀವನದ ಅವಿಭಾಜ್ಯ ಅಂಗ: ಬಿಷಪ್‌ ಜೆರಾಲ್ಡ್‌ ಲೋಬೊ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಆಯೋಗದ ನೇತೃತ್ವದಲ್ಲಿ ಧಾರ್ಮಿಕ ಜೀವನದಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗದ ಕುರಿತು ಧರ್ಮಗುರುಗಳಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ, ಉಡುಪಿ

ಕೃತಕ ಬುದ್ಧಿಮತ್ತೆ ಜೀವನದ ಅವಿಭಾಜ್ಯ ಭಾಗವಾಗಿದ್ದು, ಮನುಷ್ಯ ಒಂದಿಲ್ಲೊಂದು ಬಗೆಯಲ್ಲಿ ಕೃತಕ ಬುದ್ದಿಮತ್ತೆ ಉಪಯೋಗಿಸುವ ಪರಿಸ್ಥಿತ ಬಂದಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಮಂಗಳವಾರ ಇಲ್ಲಿನ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಆಯೋಗದ ನೇತೃತ್ವದಲ್ಲಿ ಧಾರ್ಮಿಕ ಜೀವನದಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗದ ಕುರಿತು ಧರ್ಮಗುರುಗಳಿಗೆ ನಡೆದ ಒಂದು ದಿನದ ಕಾರ್ಯಗಾರ ಉದ್ದೇಶಿಸಿ ಅವರು ಮಾತನಾಡಿದರು.

ಇಂದು ಪ್ರತಿಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯ ಉಪಯೋಗ ಕಂಡುಕೊಳ್ಳಲಾಗಿದ್ದು ಚರ್ಚಿನ ಧಾರ್ಮಿಕ ಕ್ಷೇತ್ರವೂ ಕೂಡ ಇದರಿಂದ ಹೊರತಾಗಿಲ್ಲ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗ ಇನ್ನಷ್ಟು ಹೆಚ್ಚಾಗಲಿದ್ದು ಧರ್ಮಗುರುಗಳು ಕೂಡ ಅದಕ್ಕೆ ಪೂರಕವಾಗಿ ನಡೆಯಬೇಕಾದ ಅವಶ್ಯಕತೆ ಇದ್ದು ಪ್ರತಿಯೊಂದು ಮಾಹಿತಿಯು ಬೆರಳಂಚಿನಲ್ಲಿ ಸಿಗಲಿದೆ. ಒಂದು ದಿನವನ್ನು ಉಪಯೋಗಿಸಿಕೊಂಡು ಮಾಡಬೇಕಾದ ಕೆಲಸವನ್ನು ಎಐ ತಂತ್ರಜ್ಞಾನ ಒಂದು ಗಂಟೆಯಲ್ಲಿ ಮಾಡಿ ಮುಗಿಸುತ್ತದೆ ಇದರದ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗ, ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಕೆನರಾ ಕಮ್ಯೂನಿಕೇಶನ್ ಮಂಗಳೂರು ಇದರ ನಿರ್ದೇಶಕರಾದ ವಂ.ಅನಿಲ್ ಜೆ ಫೆರ್ನಾಂಡಿಸ್ ಹಾಗೂ ಎಐ ತಂತ್ರಜ್ಞಾನದ ತರಬೇತುದಾರ ಲಿಯೋ ವಿಕ್ಟರ್ ಧರ್ಮಗುರುಗಳಿಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಅನುಗ್ರಹ ನಿರ್ದೇಶಕ ವಂ.ವಿನ್ಸೆಂಟ್ ಕ್ರಾಸ್ತಾ, ವಂ.ಅಶ್ವಿನ್ ಆರಾನ್ಹಾ, ವಂ.ಪಾವ್ಲ್ ರೇಗೊ ಸೇರಿದಂತೆ ಧರ್ಮಪ್ರಾಂತ್ಯದ ವಿವಿಧ ಧರ್ಮಗುರುಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.