ಕೃತಕ ಬುದ್ಧಿಮತ್ತೆ (ಎಐ) ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಬಹು ದೊಡ್ಡ ಪ್ರಮಾಣದಲ್ಲಿ ಆವಿಷ್ಕಾರಗಳು ನಡೆಯುತ್ತಿದ್ದು, ಇಂಥ ಕಾಲಘಟ್ಟದಲ್ಲಿ ನಾವು ಅದನ್ನು ಸವಾಲಾಗಿ ಸ್ವೀಕರಿಸಿ ಎದುರಿಸಲು ಸಿದ್ಧರಾಗಬೇಕಿದೆ ಎಂದು ಜೈನ್ ತಂತ್ರಜ್ಞಾನ ಸಂಸ್ಥೆಯ ಡಾ.ಕೆ.ಬಿ. ಪ್ರಕಾಶ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಹಾನಗಲ್ಲ: ಕೃತಕ ಬುದ್ಧಿಮತ್ತೆ (ಎಐ) ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಬಹು ದೊಡ್ಡ ಪ್ರಮಾಣದಲ್ಲಿ ಆವಿಷ್ಕಾರಗಳು ನಡೆಯುತ್ತಿದ್ದು, ಇಂಥ ಕಾಲಘಟ್ಟದಲ್ಲಿ ನಾವು ಅದನ್ನು ಸವಾಲಾಗಿ ಸ್ವೀಕರಿಸಿ ಎದುರಿಸಲು ಸಿದ್ಧರಾಗಬೇಕಿದೆ ಎಂದು ಜೈನ್ ತಂತ್ರಜ್ಞಾನ ಸಂಸ್ಥೆಯ ಡಾ.ಕೆ.ಬಿ. ಪ್ರಕಾಶ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಶನಿವಾರ ಇಲ್ಲಿನ ಕೆಎಲ್ಇ ಸಂಸ್ಥೆಯ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕಾರ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಎಐ ತಂತ್ರಜ್ಞಾನ ಅನುಷ್ಠಾನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಅರಿತುಕೊಂಡು ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಈ ತಂತ್ರಜ್ಞಾನವು ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ. ವಾಣಿಜ್ಯ ಕ್ಷೇತ್ರದ ಮಾರುಕಟ್ಟೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಕೃತಕ ಬುದ್ಧಿಮತ್ತೆಯನ್ನು ಅತಿಯಾಗಿ ಎಲ್ಲದಕ್ಕೂ ಬಳಸಿಕೊಳ್ಳುವುದು ಹಾಗೂ ಅದರ ಮೇಲೆ ಅವಲಂಬಿತವಾಗುವುದರಿಂದ ನಮ್ಮ ಬುದ್ಧಿಮತ್ತೆ ಬಳಕೆಗೆ ಹಿನ್ನಡೆಯಾಗುತ್ತದೆ. ಆತ್ಮವಿಶ್ವಾಸ ಬೆಳೆಸಿಕೊಂಡು ಹೊಸ ಸಂಶೋಧನೆಗಳನ್ನು ಕೈಗೊಳ್ಳಬೇಕು. ಇಂಥ ಯಾವುದೇ ತಂತ್ರಜ್ಞಾನದ ಬೆಳವಣಿಗೆಯ ಮಧ್ಯೆಯೂ ಹೊಸ ದಿಕ್ಕು ಕಾಣುತ್ತದೆ. ಭ್ರಮನಿರಸನ, ಉದ್ಯೋಗದಲ್ಲಿ ಭಯಪಡುವ ಅಗತ್ಯವಿಲ್ಲ. ಧೈರ್ಯದಿಂದ ಎಲ್ಲವನ್ನೂ ಎದುರಿಸಿ ಸಕಾರಾತ್ಮಕವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ ಎಂದು ಡಾ.ಕೆ.ಬಿ.ಪ್ರಕಾಶ ಕರೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಡಿ. ನಾಗೇಂದ್ರಪ್ಪ ಮಾತನಾಡಿ, ಇತ್ತೀಚೆಗೆ ಶಿಕ್ಷಣದಲ್ಲಿ ಬದಲಾವಣೆಯಾಗಿದ್ದು, ಚಟುವಟಿಕೆ ಆಧಾರಿತ ಅಧ್ಯಯನ ಆರಂಭವಾಗಿದೆ. ವಿಜ್ಞಾನದಲ್ಲಿ ಆಸಕ್ತಿ ಬೆಳೆಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗುತ್ತಿದೆ. ಪ್ರಧಾನಿಗಳ ವಿಕಸಿತ ಭಾರತ-೨೦೪೭ ಘೋಷಣೆಗೆ ನಾವೆಲ್ಲರೂ ಸ್ಪಂದಿಸಬೇಕಿದೆ. ಯುವ ಸಮುದಾಯ ಹೊಸ ಮನ್ವಂತರಕ್ಕೆ ಕೈ ಜೋಡಿಸಬೇಕಿದೆ ಎಂದರು.ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಬಿ.ಎನ್. ಸಂಗೂರ ಮಾತನಾಡಿ, ವಿಜ್ಞಾನ-ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿವೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟುಹಾಕಲು, ಕ್ರಿಯಾಶೀಲತೆ ಹೆಚ್ಚಿಸಲು ಇಂಥ ವಸ್ತು ಪ್ರದರ್ಶನ ಆಯೋಜಿಸಿ, ಬಹುಮಾನ ನೀಡಲಾಗುತ್ತಿದೆ. ವಿಜ್ಞಾನ ಕೌತುಕಮಯ ವಿಷಯವಾಗಿದೆ. ವಿಜ್ಞಾನ ಕಠಿಣವೆನಿಸಿದರೂ ಉತ್ಸಾಹಕರವಾಗಿರುತ್ತದೆ. ತಂತ್ರಜ್ಞಾನದಿಂದ ಒಳಿತು-ಕೆಡುಕುಗಳೆರಡೂ ನಮ್ಮೆದುರಿಗಿವೆ. ಅವುಗಳನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಕೆಎಲ್ಇ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ದಿವಾಕರ ಕಮ್ಮಾರ ಮಾತನಾಡಿ, ಶಿಕ್ಷಕರು ಹಾಗೂ ಪಾಲಕರು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಅವಕಾಶಗಳನ್ನು ಸೃಷ್ಟಿಸಬೇಕು. ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಪ್ರಕ್ರಿಯೆ ಪ್ರತಿದಿನ ಕೈಗೊಳ್ಳಬೇಕು. ನಾವು ನಮ್ಮ ಅರ್ಹತೆ ಹಾಗೂ ವಯೋಮಾನಕ್ಕೆ ಸರಿಹೊಂದುವ ಕನಸು ಕಾಣಬೇಕು. ಅವುಗಳನ್ನು ನನಸಾಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಅವಕಾಶಗಳನ್ನು ಹುಡುಕುವ ತುಡಿತವಿರಬೇಕು. ತಂತ್ರಜ್ಞಾನದ ವೇಗಕ್ಕೆ ಓಡದಿದ್ದರೆ ನಾವು ಹಿಂದುಳಿಯುತ್ತೇವೆ. ಇದಕ್ಕೆ ಅಧ್ಯಯನ ಅತ್ಯಗತ್ಯ ಎಂದರು.ಬಹುಮಾನ ವಿಜೇತರು:ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದ ವಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಬೊಮ್ಮನಹಳ್ಳಿ ಪ್ರೌಢಶಾಲೆಯ ಗಣೇಶ ಜ್ಯೋತಿಬಾನವರ(ಪ್ರಥಮ), ಮಂತಗಿ ಪ್ರೌಢಶಾಲೆಯ ಮಾಲತೇಶ ಅಡ್ಡೇರಿ (ದ್ವಿತೀಯ), ಇದೇ ಶಾಲೆಯ ರೇಣುಕಾ ಪೂಜಾರ (ತೃತೀಯ) ಸ್ಥಾನ ಪಡೆದರು.
ಗುಂಪು ವಿಭಾಗದ ಸ್ಪರ್ಧೆಯಲ್ಲಿ ಹಿರೂರ ಪ್ರೌಢಶಾಲೆಯ ಮಂಜುನಾಥ ಹಾಗೂ ಸಂಗಡಿಗರು (ಪ್ರಥಮ), ಅಕ್ಕಿಆಲೂರಿನ ಎಲ್ಕೆಎಸ್ಇ ಪ್ರೌಢಶಾಲೆಯ ಪ್ರಕಾಶ ಹಾಗೂ ಸಂಗಡಿಗರು (ದ್ವಿತೀಯ), ಮಂತಗಿ ಪ್ರೌಢಶಾಲೆಯ ಅನೂಷಾ ಹಾಗೂ ಸಂಗಡಿಗರು (ತೃತೀಯ) ಬಹುಮಾನಗಳನ್ನು ಪಡೆದರು. ಸುಮಾರು ೫೦ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.ಉಪನ್ಯಾಸಕ ಎಸ್.ಎಸ್. ಉರಣಕರ, ಬಿಇಒ ಆರ್.ವಿ. ಚಿನ್ನಿಕಟ್ಟಿ, ಪತ್ರಕರ್ತ ಗಿರೀಶ ದೇಶಪಾಂಡೆ ವೇದಿಕೆಯಲ್ಲಿದ್ದರು. ಎಸ್.ಪಿ. ಅರಮನಿಮಠ ಸ್ವಾಗತಿಸಿದರು, ಧರ್ಮೇಂದ್ರ ಕುನ್ನೂರ ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ ಹಡಪದ ವಂದಿಸಿದರು.