ರಾಜ್ಯದಲ್ಲಿ ಗ್ರಂಥಪಾಲಕರ ನೇಮಕಾತಿ ನನೆಗುದಿಗೆ ಬಿದ್ದಿದೆ. ಒಂದು ಕಾಲದಲ್ಲಿ ಕವಿವಿ ಗ್ರಂಥಾಲಯದಲ್ಲಿ 35 ಜನ ಗ್ರಂಥಪಾಲಕರು ಸೇವೆ ಸಲ್ಲಿಸಿದ್ದರು.

ಧಾರವಾಡ: ಕೃತಕ ಬುದ್ಧಿಮತ್ತೆ ಮತ್ತು ಗ್ರಂಥಾಲಯಗಳು ಸಮ್ಮೇಳನದ ಗೋಷ್ಠಿಯಲ್ಲಿ ಬಹು ಚರ್ಚಿತವಾದ ವಿಷಯ. ಗ್ರಂಥಾಲಯದಲ್ಲಿ ಎಐ ಅಳವಡಿಕೆ ಮಾಡಿಕೊಳ್ಳುವುದು ಒಳ್ಳೆಯದು. ಆದರೆ ಇದು ಮನುಷ್ಯನ ಸೃಜನಶೀಲತೆ ಮತ್ತು ಚಿಂತನಾಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ಇದರ ಬಳಕೆಯ ಇತಿಮಿತಿ ಅರಿತುಕೊಂಡು ಉಪಯೋಗಿಸಲು ದಾವಣಗೆರೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಕರ್ನಾಟಕ ರಾಜ್ಯ ಗ್ರಂಥಪಾಲಕರ 3ನೇ ಸಮ್ಮೇಳನದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು, ಎಐ ಹೊಸ ಪರಿಕಲ್ಪನೆಯಲ್ಲ. ಇದು ರೂಪಾಂತರಗೊಳ್ಳುತ್ತ ಹೊಸ ಹೊಸ ರೂಪ ಪಡೆಯುತ್ತಿದೆ. ಇದರಲ್ಲಿ ಒಳಿತು, ಕೆಡಕು ಎರಡೂ ಇದೆ. ಇದನ್ನು ಸರಿಯಾಗಿ ಬಳಸಿಕೊಂಡು, ಸೃಜನಶೀಲತೆ ಹೆಚ್ಚಿಸಿಕೊಂಡು ಉತ್ತಮ ಸೇವೆ ನೀಡಬೇಕು. ಇದರ ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದರು.

ರಾಜ್ಯದಲ್ಲಿ ಗ್ರಂಥಪಾಲಕರ ನೇಮಕಾತಿ ನನೆಗುದಿಗೆ ಬಿದ್ದಿದೆ. ಒಂದು ಕಾಲದಲ್ಲಿ ಕವಿವಿ ಗ್ರಂಥಾಲಯದಲ್ಲಿ 35 ಜನ ಗ್ರಂಥಪಾಲಕರು ಸೇವೆ ಸಲ್ಲಿಸಿದ್ದರು. ಅಲ್ಲಿ ಈಗ ಕೇವಲ ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ರಾಜ್ಯಾದ್ಯಂತ ಇರುವ ಪರಿಸ್ಥಿತಿ. ಸರ್ಕಾರ ರಾಜ್ಯದಲ್ಲಿರುವ ಎಲ್ಲ ಹಂತದ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಬೇಕು. ಗ್ರಂಥಾಲಯ ಮಕ್ಕಳ ಭವಿಷ್ಯವನ್ನು ರೂಪಿಸುವ ಕೇಂದ್ರಗಳಾಗಬೇಕು ಎಂದರು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ನಮ್ಮನ್ನು ಮನುಷ್ಯರನ್ನಾಗಿ ಮಾಡಿದ್ದು ನಮ್ಮ ಗುರುಗಳು. ಗ್ರಂಥಾಲಯ ಮತ್ತು ಗ್ರಂಥಪಾಲಕರು. ಪುಸ್ತಕ ಓದಿದ ಜ್ಞಾನ ನಮ್ಮ ಮನಸ್ಸಿನಲ್ಲಿ ಬಹಳ ದಿನಗಳವರೆಗೆ ಉಳಿಯುತ್ತದೆ. ಮೊಬೈಲ್, ಇಂಟರ್‌ನೆಟ್‌ನಲ್ಲಿ ನೋಡಿದ್ದು ಕ್ಷಣಾರ್ಧದಲ್ಲಿ ಮರೆತುಹೋಗುತ್ತದೆ. ನಮ್ಮ ಗುರುಗಳು ನಮಗೆ ಓದುವ ಅಭಿರುಚಿ ಹೆಚ್ಚಿಸುತ್ತಿದ್ದರು. ಶಾಸಕರ ಅನುದಾನಗಳಲ್ಲಿ ತಾಲೂಕಿನಲ್ಲಿ ಮಾದರಿ ಗ್ರಂಥಾಲಯಗಳು ಬರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಎಲ್ಐಎಸ್ ಅಕಾಡೆಮಿ ಅಧ್ಯಕ್ಷ ಪ್ರೊ. ಪಿ.ವಿ. ಕೊಣ್ಣೂರ ಮಾತನಾಡಿ, ಗ್ರಂಥಾಲಯ ಕ್ಷೇತ್ರದ ಕುಂದುಕೊರತೆಗೆ ನಿವಾರಣೆಗೆ ವಿದ್ಯಾವರ್ಧಕ ಸಂಘ ಕೈಜೋಡಿಸಬೇಕು. ಈ ಹಿಂದೆ ಜರುಗಿದ ಅನೇಕ ಚಳವಳಿ ಆರಂಭವಾಗಿದ್ದು ಧಾರವಾಡದಿಂದ ಹಾಗೂ ಕವಿವ ಸಂಘದಿಂದ. ಆ ದಿಶೆಯಲ್ಲಿ ಈಗ ಗ್ರಂಥಾಲಯ ಸಮಸ್ಯೆ ಕುರಿತು ಧಾರವಾಡದ ವಿದ್ಯಾವರ್ಧಕ ಸಂಘದಿಂದ ಚಳವಳಿ ಆರಂಭವಾಗಲಿ ಎಂದರು.

ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ. ಎಸ್.ಎಲ್. ಕಾಡದೇವರಮಠ ಮಾತನಾಡಿ, ಕನ್ನಡವೆಂದರೆ ಸ್ವಾಭಿಮಾನ ಅದನ್ನು ಕವಿವ ಸಂಘದ ಗ್ರಂಥಾಲಯ ಸಮ್ಮೇಳನದಲ್ಲಿ ಎಲ್ಲ ಗೋಷ್ಠಿಗಳು ಕನ್ನಡದಲ್ಲಿ ಜರುಗಿದ್ದು ಸಂತಸದ ಸಂಗತಿ. ಗ್ರಂಥಪಾಲಕರ ನೇಮಕಾತಿಯಲ್ಲಿ ಸರ್ಕಾರ ಉದಾಸೀನತೆ ತೋರುತ್ತಿದೆ. ಪ್ರತಿವರ್ಷ ನಾಲ್ಕು ಸಾವಿರ ಶಿಕ್ಷಕರನ್ನು ನೇಮಿಸುವ ಸರ್ಕಾರ ಗ್ರಂಥಪಾಲಕರನ್ನು ನೇಮಿಸುತ್ತಿಲ್ಲ. 45 ಸರ್ಕಾರಿ ಕಾಲೇಜುಗಳಿದ್ದು ಅಲ್ಲಿ ಸರಿಯಾಗಿ ಗ್ರಂಥಪಾಲಕರಿಲ್ಲ. ಈ ಕುರಿತು ಕರ್ನಾಟಕ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಅ. 5ರಂದು ಹೋರಾಟ ಹಮ್ಮಿಕೊಂಡಿದ್ದು ಸರ್ಕಾರಕ್ಕೆ ಇದು ಎಚ್ಚರಿಕೆ ಗಂಟೆ ಎಂದರು.

ಕವಿವ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಿನಾಯಕ ಬಂಕಾಪೂರ ಸಮ್ಮೇಳನದ ಎರಡು ದಿನದ ಸಮಗ್ರ ವರದಿ ಮಂಡಿಸಿದರು. ಅತ್ಯುತ್ತಮ ಪ್ರಬಂಧ ಮಂಡನೆಗಾಗಿ ಕೃಷ್ಣಾ ಮರಡ್ಡಿ, ಡಾ. ಕೋಟೆಪ್ಪ ಬಿ. ಹಾಗೂ ಡಾ. ಶಿವರಂಜಿನಿ ಮೊಗಲಿ ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ನಿರ್ಣಯಗಳು:

ಸರ್ಕಾರ ಎಲ್ಲ ಹಂತದ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರನ್ನು ತುಂಬಬೇಕು.

ಗ್ರಾಮೀಣ ಮತ್ತು ಶಾಲಾ ಗ್ರಂಥಾಲಯಗಳನ್ನು ಹೆಚ್ಚು ಬಲಪಡಿಸಬೇಕು.

ಸಾರ್ವಜನಿಕ ಗ್ರಂಥಾಲಯಗಳನ್ನು ಹೆಚ್ಚು ಬಲಪಡಿಸಬೇಕು.

1965ರಲ್ಲಿ ಜಾರಿಗೆ ತಂದಿರುವ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು ಮರುತಿದ್ದುಪಡಿ ಮಾಡಬೇಕು.