ಸಾರಾಂಶ
ವಿವಿಧ ಸಂಸ್ಥೆಗಳಿಂದ ಮೂರು ದಿನ ಆರೋಗ್ಯ ಶಿಬಿರ
ಕನ್ನಡಪ್ರಭ ವಾರ್ತೆ ಹಾಸನಅನೇಕ ಕಡೆ ಆರೋಗ್ಯ ಶಿಬಿರಗಳು ನಡೆಯುತ್ತಲೇ ಇರುತ್ತವೆ. ಆದರೆ ಕೃತಕ ಕೈಕಾಲು ಜೋಡಣಾ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಕೆ.ಆರ್.ಪುರಂ ಬಳಿ ಇರುವ ಸಂಜೀವಿನಿ ಆಸ್ಪತ್ರೆ ಆವರಣದಲ್ಲಿ ಮೈಕ್ರೋ ಲ್ಯಾಬ್ಸ್ ಪ್ರಾಯೋಜಕತ್ವದಲ್ಲಿ ರೋಟರಿ ಕ್ಲಬ್ ಹಾಸನ ಹೊಯ್ಸಳ, ರೋಟರಿ ಕ್ಲಬ್ ಹಾಸನ ಟೈಗರ್, ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ ಸಹಾಯಕ ಸಮಿತಿ, ಜೈಪುರ್ ಸಹರಾ ಗ್ರೂಪ್ ಆಫ್ ಇಂಡಸ್ಟ್ರೀಸ್, ಇನ್ ವ್ಹೀಲ್ ಕ್ಲಬ್ ಆಫ್ ಹಾಸನ ಗೋಲ್ಡ್, ಯೂತ್ ಹ್ಯಾಂಡ್ ಫೌಂಡೇಶನ್, ಕನ್ನಡ ರಕ್ಷಣಾ ವೇದಿಕೆ, ಭಾರತ ಸೇವಾ ದಳ ಜಂಟಿಯಾಗಿ ಹಮ್ಮಿಕೊಂಡ ಜೂ.೨೩ ರಿಂದ 25ರ ವರೆಗಿನ ಮೂರು ದಿನಗಳ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.‘ಆರೋಗ್ಯ ತಪಾಸಣೆಗೆ ಆಗಾಗ್ಗೆ ಅಲ್ಲಲ್ಲಿ ಶಿಬಿರಗಳು ನಡೆಯುತ್ತಿರುತ್ತದೆ. ಆದರೆ ಕೃತಕ ಕಾಲು ಜೋಡಣೆ ಮಾಡುವ ಶಿಬಿರ ಎಂದರೆ ಪುಣ್ಯದ ಕಾರ್ಯಕ್ರಮ. ೨೦೨೩ರಲ್ಲೂ ಕೂಡ ರೋಟರಿ ಕ್ಲಬ್ ಹಾಸನ ಹೊಯ್ಸಳ ಮಾಡಿದ ಕಾರ್ಯಕ್ರಮದಲ್ಲೂ ಕೂಡ ನಾನು ಕೂಡ ಭಾಗವಹಿಸಿದ್ದು, ಮೂರು ದಿನ ಈ ಶಿಬಿರದಲ್ಲಿ ಮೊದಲ ದಿನವೇ ೧೭೦ ಜನರು ಬಂದಿದ್ದು, ಇನ್ನು ಎರಡು ದಿನ ಈ ಶಿಬಿರ ನಡೆಯಲಿದ್ದು, ಮೂರು ದಿನದಲ್ಲಿ ೩೫೦ಕ್ಕೂ ಹೆಚ್ಚು ಜನ ಫಲಾನುಭವಿಗಳೂ ಇದರ ಅನುಕೂಲ ಪಡೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.
‘ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆಯಲ್ಲಿ ಕಡಿಮೆ ದರ ಪಡೆಯಲಾಗುತ್ತಿದೆ. ರೋಟರಿ ಕ್ಲಬ್ ಹಾಸನ ಹೊಯ್ಸಳದಿಂದ ೫ ಡಯಾಲಿಸಸ್ ಮಿಷನ್ ಕೂಡ ಕೊಡಲಾಗಿದ್ದು, ಇತರ ಆಸ್ಪತ್ರೆಗಿಂತ ಕಡಿಮೆ ವೆಚ್ಚದಲ್ಲಿ ೧ ಸಾವಿರ ರು.ಗೆ ಡಯಾಲಿಸಿಸ್ ಮಾಡಲಾಗುತ್ತದೆ. ತುಂಬ ಕಡು ಬಡವರು ಬಂದರೆ ನಮ್ಮ ತಂದೆ ದಿವಂಗತ ಎಚ್.ಎಸ್. ಪ್ರಕಾಶ್ ಆಶೀರ್ವಾದ, ಡಾ.ಎ.ಸಿ. ಮುನಿವೆಂಕಟೇಗೌಡ, ಡಾ.ಗುರುರಾಜ ಹೆಬ್ಬಾರ್ ಸೇರಿ ಈ ಮೂವರು ಸಂಸ್ಥಾಪಕರ ಹೆಸರಿನಲ್ಲಿ ನಾನು ವೈಯಕ್ತಿಕವಾಗಿ ೫೦೦ ರು. ಭರಿಸಿದ್ದೇನೆ. ಚಿಕಿತ್ಸೆಯನ್ನು ಕೇವಲ ೫೦೦ ರು.ಗೆ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.ರೋಟರಿ ಕ್ಲಬ್ ಹಾಸನ ಹೊಯ್ಸಳ ಅಧ್ಯಕ್ಷ ಎಂ.ಡಿ. ಕುಮಾರ್ ಮತ್ತು ಶ್ರೀ ಭಗವಾನ್ ಮಹಾವೀರ ವಿಕಲಾಂಗ ಸಹಾಯಕ ಸಮಿತಿಯ ಅನಿಲ್ ಸುರಾನಾ ಮಾಧ್ಯಮದೊಂದಿಗೆ ಮಾತನಾಡಿ, ‘ನಮ್ಮ ಸಂಸ್ಥೆ ಕಳೆದ ೫೦ ವರ್ಷಗಳಿಂದಲೂ ೧೮ ದೇಶಗಳಲ್ಲಿ ಈ ಉಚಿತ ಕೆಲಸ ಮಾಡಲಾಗುತ್ತಿದೆ. ಮೈಕ್ರೋ ಲ್ಯಾಬ್ಸ್, ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಉಚಿತವಾಗಿ ಕೃತಕ ಕೈಕಾಲು ಜೋಡಣೆ ಮಾಡಲಾಗುತ್ತಿದೆ’ ಎಂದರು.
ಸಂಜೀವಿನಿ ಸಹಕಾರಿ ಆಸ್ಪತೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಉಪಾಧ್ಯಕ್ಷ ಎಚ್.ಆರ್.ಸುರೇಶ್, ಮಾಜಿ ಅಧ್ಯಕ್ಷ ಎಚ್.ಜೆ.ಗಣೇಶ್, ಕಾರ್ಯಾಧ್ಯಕ್ಷ ಡಿ.ಅರುಣ್ ಕುಮಾರ್, ಬಿ.ಜಿ.ಶ್ರೀಧರ್, ಬಿ.ಎನ್.ಜಯರಾಮ್, ಮಾಜಿ ಅಧ್ಯಕ್ಷ ಗಿರೀಗೌಡ, ಜಿ.ಎಸ್. ವಿಮಾಲ, ರೋಟರಿ ಕ್ಲಬ್ ಹಾಸನ ಹೊಯ್ಸಳದ ಮೋಹನ್, ಅನಿಲ್ ಸುರಾನಾ, ಐಎಂಎ ಅಧ್ಯಕ್ಷ ವೆಂಕಟೇಶ್, ಶಿವಕುಮಾರ್, ಜಿ.ಒ. ಮಹಾಂತಪ್ಪ, ಡಾ.ವಸಂತ, ಭಾರತ ಸೇವಾದಳದ ವಲಯ ಸಂಘಟಕಿ ವಿ.ಎಸ್.ರಾಣಿ, ರೋಟರಿ ಕಾರ್ಯದರ್ಶಿ ಪವನ್ ಇದ್ದರು. ಲಕ್ಷ್ಮೀನಾರಾಯಣ್ ಕಾರ್ಯಕ್ರಮ ನಿರೂಪಿಸಿದರು. ವೇದ ಪ್ರಾರ್ಥಿಸಿದರು. ನಳಿನಿ ಸ್ವಾಗತಿಸಿದರು.