ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನಲ್ಲಿ ಜಾನಪದ ಕಲೆಗಳು ಇಂದಿಗೂ ಜೀವಂತವಾಗಿದ್ದು ಈ ಕಲೆಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಜಾನಪದ ಹಾಗೂ ಇತರೆ ಕಲೆಗಳು, ಕಲಾವಿದರ ದಾಖಲೀಕರಣಿಸಬೇಕು ಈ ಮೂಲಕ ಅವರಿಗೆ ಸರ್ಕಾರದಿಂದ ಸೌಲಭ್ಯ ಕಲ್ಲಿಸಬೇಕು ಎಂದು ಬಯಲಾಟ ಕಲಾವಿದ ವೀರ್ಲಗೊಂದಿ ಡಿ.ನಾಗರಾಜು ಆಗ್ರಹಿಸಿದರು.

ತಾಲೂಕಿನ ಯರಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗಡಿನಾಡ ಜಾನಪದ ಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಜಾನಪದ ಹಾಗೂ ಯಕ್ಷಗಾನ ಕಲೆಗಳು ವಿಶೇಷ ಮನ್ನಣೆ ಪಡೆದಿರುವುದು ಸಂತಸ ತಂದಿದೆ. ಇಲ್ಲಿನ ಕಲೆಗಳು ಪ್ರಾಚೀನ ಕಾಲದ ನಾಗರಿಕತೆ, ದೈವಾರಾಧನೆ ಹಾಗೂ ಜನಜೀವನದ ವೈವಿಧ್ಯತೆಗಳನ್ನು ಬಿಂಬಿಸುತ್ತಿವೆ. ವಿಶೇಷವಾಗಿ ಜಾನಪದ ಕಲೆಗಳಾದ ಕೋಲಾಟ, ಬಯಲಾಟ, ಸೋಬಾನೆ ಪದಗಳು, ಅರೆವಾದ್ಯ, ತಮಟೆಕಲೆ, ಮಣೇವು ಕುಣಿತ ಮೊದಲಾದ ಕಲೆಗಳು ಇಂದಿಗೂ ಜೀವಂತವಾಗಿವೆ. ಇಂತಹ ಕಲೆಗಳ ಜೀವಂತಿಕೆ ಕಾಪಾಡುವ ಹೊಣೆ ಸರ್ಕಾರ ಹಾಗೂ ಯುವಕರ ಮೇಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಟ್ಟಾ ನರಸಿಂಹಮೂರ್ತಿ ಮಾತನಾಡಿ, ಜಾನಪದ ಹಾಗೂ ಇತರೆ ಗ್ರಾಮೀಣ ಮಾದರಿಯ ಕಲೆಗಳು ಉಳಿಯಬೇಕಾದರೆ ಸರ್ಕಾರ ಕಲಾವಿದರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕಲಾವಿದರಿಗೆ ಮಾಸಾಶನ ವಿವಿಧ ಸವಲತ್ತುಗಳನ್ನು ನೀಡಿದಾಗ ಮಾತ್ರ ಕಲೆ ತನ್ನಷ್ಟಕ್ಕೆ ತಾನೇ ಉಳಿಯುತ್ತದೆ. ಗಡಿ ಭಾಗದಲ್ಲಿ ಜಾನಪದ ಕಲೆ ಉಳಿಸುವತ್ತ ಅನೇಕ ಕಾರ್ಯಕ್ರಮಗಳ ಮೂಲಕ ಇಲ್ಲಿನ ಸಂಘ ಸಂಸ್ಥೆಗಳ ಕಾರ್ಯ ರೂಪಿಸುತ್ತಿರುವುದು ಅತ್ಯಂತ ಶ್ಲಾಘನೀಯ. ಕಲೆಗಳ ಜೀವಂತಿಕೆ ಕಾಪಾಡಿ ಮುಂದಿನ ಪೀಳಿಗೆಗೆ ಮುಂದುವರೆಸಬೇಕು ಕರೆ ನೀಡಿದರು.ರಂಗಭೂಮಿ ಕಲಾವಿದ ಎನ್‌.ಎ.ಈರಣ್ಣ ಮಾತನಾಡಿ, ಜಾನಪದ ಕಲೆಗಳನ್ನು ಉಳಿಸಲು ಗ್ರಾಮೀಣ ಭಾಗದಲ್ಲಿ ಕಲಾವಿದರಿಗೆ ವೇದಿಕೆಗಳನ್ನು ನೀಡುವುದರ ಮೂಲಕ ಅವರಿಗೆ ಸೂಕ್ತ ಅವಕಾಶ ಕಲ್ಪಿಸಬೇಕೆಂದು ಅಭಿಪ್ರಾಯಪಟ್ಟರು. ಇದೇ ವೇಳೆ ಹಂಸವೇಣಿ ಮತ್ತು ತಂಡದವರಿಂದ ಭರತನಾಟ್ಯ, ವೀರಲಗೊಂದಿ ನಾಗರಾಜ್ ಮತ್ತು ತಂಡದವರಿಂದ ಜಾನಪದ ಗಾಯನ ಹನುಮಕ್ಕ ಮತ್ತು ತಂಡದವರಿಂದ ಕೋಲಾಟ, ಮಲ್ಲನಾಯಕನಹಳ್ಳಿ ದ್ಯಾವರಪ್ಪ ಮತ್ತು ತಂಡದವರಿಂದ ತತ್ವಪದ ಗಾಯನ, ಪದ್ಮಕ್ಕ ಮತ್ತು ತಂಡದವರಿಂದ ಸೋಬಾನೆ ಪದ, ಅರೆವಾದ್ಯ ನರೇಶ್ ಮತ್ತು ನರಸಿಂಹಪ್ಪ ತಂಡದವರಿಂದ ಸೋಮನಕುಣಿತ ಮರಿಸ್ವಾಮಿ ಮತ್ತು ತಂಡದವರಿಂದ, ಭಜನೆ ವೆಂಕಟೇಶ್ ಮತ್ತು ತಂಡದವರಿಂದ ನಡೆಸಿ ಕಲಾವಿದ ಈರಣ್ಣ ಅವರ ರಂಗ ಗೀತೆಗಳ ಮೂಲಕ ಜನಮನ ರಂಜಿಸಿದ್ದು ವಿಶೇಷವಾಗಿತ್ತು.

ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಹಿರಿಯ ಕಲಾವಿದರಾದ ಈರಣ್ಣ,ಎನ್.ಮರಿಸ್ವಾಮಿ, ಸತ್ಯನಾರಾಯಣ್‌, ಬೆಳ್ಳಿಬಟ್ಲು ಬಲರಾಮ್, ಯರಪಾಳ್ಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಂಗನಾಥ್ ಶಿಕ್ಷಕರಾದ ಮಲ್ಲಿಕಾರ್ಜುನ್‌, ದ್ಯಾವ್ರಪ್ಪ, ತಿಮ್ಮರಾಯಪ್ಪ,ಬಾಣದ ರಂಗಪ್ಪ,ಮೃದಂಗ ಕಲಾವಿರಾದ ಶಿವಗಂಗಪ್ಪ, ಸಿದ್ದಾರ್ಥ ಚಾರಿಟಬಲ್‌ ಟ್ರಸ್ಟ್‌ ಕಾರ್ಯದರ್ಶಿ ವಿ.ಎಸ್‌.ನಾಗೇಶ್ ಉಪಸ್ಥಿತರಿದ್ದರು.