ಕಲೆಗಳ ಪ್ರೋತ್ಸಾಹಿಸಿ ಕಲಾವಿದರ ಉಳಿಸಬೇಕು: ಬೇಳೂರು

| Published : Oct 21 2023, 12:30 AM IST

ಸಾರಾಂಶ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಸನ್ಮಾನ
ಕನ್ನಡಪ್ರಭ ವಾರ್ತೆ ಸಾಗರ ಯಕ್ಷಗಾನವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡ ಹಲವು ಕಲಾವಿದರು ನಮ್ಮೊಂದಿಗಿದ್ದಾರೆ. ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಕಲಾವಿದರನ್ನು ಉಳಿಸಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘ ಆಯೋಜಿಸಿದ್ದ ಶ್ರೀ ಕಾಲಭೈರೇಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನ, ನಾಟ್ಯಶ್ರೀ ರಜತ ನೂಪುರ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಬೇರೆ ಬೇರೆ ಕಾರಣಗಳಿಂದ ಯಕ್ಷಗಾನ ಕಲಾ ಪ್ರದರ್ಶನಗಳು ಕಡಿಮೆಯಾಗುತ್ತಿದ್ದು, ಕಲಾವಿದರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಲೆಯನ್ನೇ ಬದುಕಾಗಿಸಿಕೊಂಡ ಬಡ ಕಲಾವಿದರಿಗೆ ಸರ್ಕಾರ ಮಾಸಾಶನ ಕೊಡಬೇಕು ಎಂದು ಹೇಳಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮಲ್ಲಿ ಒಕ್ಕಲಿಗ ಸಮಾಜ ಅಲ್ಪಸಂಖ್ಯಾತವಾಗಿದೆ. ಆರ್ಥಿಕವಾಗಿಯೂ ದುರ್ಬಲವಾಗಿದೆ. ಎಲ್ಲ ಸಮಾಜದವರನ್ನೂ ನಾವು ಪ್ರೀತಿ, ಗೌರವದಿಂದ ಕಾಣುತ್ತೇವೆ. ಇಲ್ಲಿನ ಸಮುದಾಯ ಭವನಕ್ಕೆ ಸರ್ಕಾರದಿಂದ ಸಿಗಬೇಕಿರುವ ₹50 ಲಕ್ಷ ಆರ್ಥಿಕ ನೆರವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಚರ್ಚಿಸಿ, ಮಂಜೂರು ಮಾಡಿಸಲು ಶಾಸಕರೊಂದಿಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಹಿರಿಯ ತಾಳಮದ್ದಳೆ ಅರ್ಥಧಾರಿ ಎಂ.ಆರ್. ಲಕ್ಷ್ಮೀನಾರಾಯಣ ಅಮಚಿ ಅವರಿಗೆ ನಾಟ್ಯಶ್ರೀ ರಜತ ನೂಪುರ ಪುರಸ್ಕಾರ ನೀಡಿ ಗೌರವಿಸಲಾಯಿತು. ನಾಟ್ಯಶ್ರೀ ಕಲಾ ತಂಡದ ಸಂಚಾಲಕ ವಿದ್ವಾನ್ ದತ್ತಮೂರ್ತಿ ಭಟ್ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಆಫ್ಸ್‌ಕೋಸ್‌ ಅಧ್ಯಕ್ಷ ಬಿ.ಎ. ಇಂದೂಧರ ಗೌಡ, ಕೆಂಪೇಗೌಡ ಯುವಜನ ಸಂಘದ ಅಧ್ಯಕ್ಷ ನವೀನ್, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಸಂಘದ ವೆಂಕಟರಮಣ ಗೌಡ, ಭಾಗೀರಥಿ ಪ್ರಕಾಶ್, ಎನ್.ರಮೇಶ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿನೇಶ್ ಸ್ವಾಗತಿಸಿ, ಬಸವರಾಜು ನಿರೂಪಿಸಿ, ಮಂಜುನಾಥ ಗೌಡ ವಂದಿಸಿದರು. ಸಭಾ ಕಾರ್ಯಕ್ರಮ ನಂತರ ನಾಟ್ಯಶ್ರೀ ಕಲಾ ತಂಡದಿಂದ ಶ್ರೀ ಕಾಲಭೈರೇಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಗಣೇಶಮೂರ್ತಿ, ಲಕ್ಷ್ಮೀನಾರಾಯಣ ಸಂಪ ಹಾಗೂ ಮುಮ್ಮೇಳದಲ್ಲಿ ವಿದ್ವಾನ್ ದತ್ತಮೂರ್ತಿ ಭಟ್, ಅಶೋಕ್ ಭಟ್ ಸಿದ್ದಾಪುರ, ಪ್ರಭಾಕರ ಹೆಗಡೆ, ನಾಗೇಂದ್ರ ಭಟ್ ಮೂರೂರು, ಸದಾಶಿವ ಭಟ್ ಮಲವಳ್ಳಿ, ವಿಜಯ ಗಾಣಿಗ ಬೀಜಮಕ್ಕಿ, ವೆಂಕಟೇಶ್ ಬಗರಿಮಕ್ಕಿ, ಪ್ರಣವ ಭಟ್ ಭಾಗವಹಿಸಿದ್ದರು. - - - -20ಕೆ.ಎಸ್.ಎ.ಜಿ.2: ಹಿರಿಯ ತಾಳಮದ್ದಳೆ ಅರ್ಥಧಾರಿ ಎಂ.ಆರ್. ಲಕ್ಷ್ಮೀನಾರಾಯಣ ಅಮಚಿ ಅವರಿಗೆ ನಾಟ್ಯಶ್ರೀ ರಜತ ನೂಪುರ ಪುರಸ್ಕಾರ ನೀಡಿ ಗೌರವಿಸಲಾಯಿತು.