ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಗಳೂರುಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡೆದ್ದು ಸ್ಪರ್ಧಿಸಿದ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಈಗ ಬಿಜೆಪಿ ಸೇರಿದರೂ ಯಾವುದೇ ಹುದ್ದೆ ಇಲ್ಲದೆ ಅತಂತ್ರವಾಗಿದ್ದಾರೆ. ತನ್ನ ಪಾಡಿಗೆ ತಾನು ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದರೂ ಇತ್ತ ಬಿಜೆಪಿಗೂ, ಅತ್ತ ಸಂಘಪರಿವಾರಕ್ಕೂ ಬೇಡದ ಕೂಸಾಗಿ ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ.
ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರಲ್ಲಿ ಅಸೆಂಬ್ಲಿ ಚುನಾವಣೆಗೆ ಬಂಡಾಯ ಸ್ಪರ್ಧಿಸಿದಾಗಲೇ ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ಫಲಿತಾಂಶ ಬಂದಾಗ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಾಗ ಇನ್ನಿಲ್ಲದ ಮುನಿಸು ಬಿಜೆಪಿ ಪಾಳಯದಲ್ಲಿ ಕಂಡುಬಂದಿತ್ತು. ಇದೇ ವೇಳೆಗೆ ಅರುಣ್ ಕುಮಾರ್ ಹುಟ್ಟುಹಾಕಿದ ಪುತ್ತಿಲ ಪರಿವಾರ ಕೂಡ ಸಂಘಪರಿವಾರ ಸಂಘಟನೆಗೆ ಸೆಡ್ಡು ಹೊಡೆಯುವಂತೆ ವರ್ತಿಸಿರುವುದು ಕೆಂಗಣ್ಣಿಗೆ ಗುರಿಯಾಗಿತ್ತು.ಲೋಕಸಭಾ ಚುನಾವಣೆ ವೇಳೆ ಮತ್ತೆ ಪುತ್ತಿಲ ಬಿಕ್ಕಟ್ಟು ಮುಂದುವರಿದರೆ ಕಷ್ಟ ಎಂದರಿತ ಬಿಜೆಪಿ ಜಿಲ್ಲಾ ಮುಖಂಡರು ಸಂಘಪರಿವಾರಕ್ಕೆ ಮನವರಿಕೆ ಮಾಡಿದ್ದರು. ಬಳಿಕ ಅರುಣ್ ಕುಮಾರ್ ಪುತ್ತಿಲ ಅವರನ್ನು ಬೇಷರತ್ ಆಗಿ ಬಿಜೆಪಿಗೆ ಮರು ಸೇರ್ಪಡೆಗೊಳಿಸಿದ್ದರು. ಪುತ್ತಿಲ ಪರಿವಾರದ ಪ್ರಮುಖರಿಗೆ ಪಕ್ಷದ ಜಿಲ್ಲೆ ಹಾಗೂ ಮಂಡಲ ಮಟ್ಟದಲ್ಲಿ ಜವಾಬ್ದಾರಿ ನೀಡಿ ಪುತ್ತಿಲ ಅವರನ್ನು ಸಮಾಧಾನ ಪಡಿಸುವ ತಂತ್ರಗಾರಿಕೆ ನಡೆಸಿದ್ದರು. ಅರುಣ್ ಕುಮಾರ್ ಪುತ್ತಿಲಗೆ ಪಕ್ಷದ ಜವಾಬ್ದಾರಿ ನೀಡುವ ವಿಚಾರದಲ್ಲಿ ಯಾರಾದರೂ ಪ್ರಶ್ನಿಸಿದರೆ, ಮಂಡಲ ಹಾಗೂ ಜಿಲ್ಲಾ ಮುಖಂಡರು ಪಕ್ಷದ ವರಿಷ್ಠರತ್ತ ಕೈ ತೋರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.
ದೂರವಾಗದ ಪರಿವಾರದ ಮುನಿಸು: ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಯಾಗಿ ಪಕ್ಷಕ್ಕಾಗಿ ಓಡಾಟ ನಡೆಸುತ್ತಿದ್ದರೂ ಸಂಘಪರಿವಾರದ ಕೆಲವೊಂದು ಮುಖಂಡರ ಮುನಿಸು ಇನ್ನೂ ದೂರವಾಗಿಲ್ಲ. ಪುತ್ತೂರಿನ ವಿಶ್ವಹಿಂದು ಪರಿಷತ್ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅರುಣ್ ಪುತ್ತಿಲ ಆಗಮಿಸಿದಾಗ ತಡೆದ ವಿದ್ಯಮಾನ, ಅದೇ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನ ಶಾಸಕರು, ಮಾಜಿ ಶಾಸಕರು ಆಗಮಿಸಿದಾಗ ಸಿಕ್ಕಿದ ರತ್ನಕಂಬಳಿ ಸ್ವಾಗತ ಇವೆಲ್ಲವೂ ಪುತ್ತಿಲ ಬಗೆಗೆ ಸಂಘಪರಿವಾರಕ್ಕೆ ಇರುವ ಮನಸ್ತಾಪ ನಿವಾರಣೆಯಾಗಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ.ತ್ರಿಶಂಕು ಸ್ಥಿತಿಗೆ ಪುತ್ತಿಲ?:
ಅರುಣ್ ಕುಮಾರ್ ಪುತ್ತಿಲ ಅವರನ್ನು ಕಾರ್ಯಕ್ರಮಕ್ಕೆ ಆಗಮಿಸದಂತೆ ತಡೆದದ್ದೇ ಹಿಂದು ಸಂಘಟನೆಗಳು. ಅವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ನೀಡಬಾರದು ಎಂದು ಅಡ್ಡಗಾಲು ಹಾಕುತ್ತಿರುವುದೇ ಸಂಘಪರಿವಾರ ಸೂಚನೆ ಮೇರೆಗೆ ಪಕ್ಷದ ಉನ್ನತ ನಾಯಕರು ಎಂಬುದು ಪುತ್ತಿಲ ಬೆಂಬಲಿಗರ ಆರೋಪ. ಈ ವಿಚಾರ ಈಗ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.ಪುತ್ತಿಲರ ಮುಂದಿನ ಹಾದಿ ಏನು?ಈಗಾಗಲೇ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷದಲ್ಲಿ ಯಾವುದೇ ಹುದ್ದೆ ಸಿಗದೇ ಇದ್ದರೆ ಹೀಗೆಯೇ ಇರುತ್ತಾರೆಯೇ ಅಥವಾ ಮುಂದಿನ ಹಾದಿ ಏನು ಎಂಬ ಜಿಜ್ಞಾಸೆ ಪುತ್ತಿಲರ ಬೆಂಬಲಿಗರನ್ನು ಆವರಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸಂಘಪರಿವಾರದ ತೀವ್ರ ವಿರೋಧ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಯಾವುದೇ ಹುದ್ದೆ ನೀಡುವ ಸಾಧ್ಯತೆ ಕಡಿಮೆ. ಸಂಘಪರಿವಾರದ ಹಿರಿಯರು ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನ ಫಲ ನೀಡುವುದೋ ಗೊತ್ತಿಲ್ಲ. ಇಲ್ಲವೇ ಪುತ್ತಿಲ ಮರಳಿ ಹಿಂದು ಸಂಘಟನೆಗಳ ಜವಾಬ್ದಾರಿ ವಹಿಸಿಕೊಳ್ಳುತ್ತಾರಾ ಎಂಬುದೂ ನಿಖರವಾಗಿಲ್ಲ.ಅರುಣ್ ಕುಮಾರ್ ಬಿಜೆಪಿ ಸೇರಿದರೂ ಪುತ್ತಿಲ ಪರಿವಾರ ವಿಸರ್ಜನೆಗೊಂಡಿಲ್ಲ. ಅದರ ನೇತೃತ್ವದಲ್ಲೇ ಈ ಬಾರಿಯೂ ಡಿಸೆಂಬರ್ ಕೊನೆಗೆ ಪುತ್ತೂರಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಏರ್ಪಡಿಸುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿಸಿದರೆ, ಮುಂದಿನ ಅಸೆಂಬ್ಲಿ ಚುನಾವಣೆ ವೇಳೆ ಕಳೆದ ಬಾರಿಯಂತೆ ಮತ್ತೆ ಅರುಣ್ ಕುಮಾರ್ ಪುತ್ತಿಲ ಚುನಾವಣೆಗೆ ಸ್ಪರ್ಧಿಸುವ ಸನ್ನಿವೇಶ ಎದುರಾಗುತ್ತಾ ಎನ್ನುವ ಮಾತೂ ಬೆಂಬಲಿಗರಲ್ಲಿ ಕೇಳಿಬರುತ್ತಿದೆ.