ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಆರ್ಯ ಈಡಿಗ ಸಮಾಜಕ್ಕೆ ಯಾವುದೇ ಕೊಡುಗೆ ನೀಡದ ಸಚಿವ ಮಧು ಬಂಗಾರಪ್ಪ ಅವರು ಈಗ ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದು ಸೊರಬ ತಾಲೂಕು ಆರ್ಯ ಈಡಿಗ ಸಮಾಜ ಅಧ್ಯಕ್ಷ ಕೆ.ಅಜ್ಜಪ್ಪ ಆರೋಪಿಸಿದರು.ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2018ರಲ್ಲಿ ನಾನು ಚೀಟಿ ಆಯ್ಕೆ ಮೂಲಕ ಸಮಾಜದ ಅಧ್ಯಕ್ಷನಾಗಿ ಆಯ್ಕೆಯಾಗಿ ಬಳಿಕ ಸಂಘಕ್ಕೆ 5 ಎಕರೆ ಜಾಗ ಮಂಜೂರು ಮಾಡಿಸಿದೆ. ಅನಂತರ 20 ಲಕ್ಷ ರು. ಹೊಂದಿಸಿ ಹಕ್ಕುಪತ್ರ ಪಡೆಯಲಾಯಿತು. ಆ ಬಳಿಕ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಸಮಾಜದ ಅಭಿವೃದ್ಧಿ ಕಾರ್ಯಕ್ಕಾಗಿ ₹2 ಕೋಟಿ ಮಂಜೂರು ಮಾಡಿದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಿಸಬೇಕು ಎಂಬ ಉದ್ದೇಶದಿಂದ ಕುಮಾರ್ ಬಂಗಾರಪ್ಪ ಶಾಸಕರಾಗಿದ್ದಾಗ ₹12 ಕೋಟಿ ಯೋಜನೆ ಮಾಡಿ, ನೀಲನಕ್ಷೆ ತಯಾರಿಸಲಾಗಿತ್ತು. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಮಂಜೂರಾಗಿದ್ದ ₹2 ಕೋಟಿ ಹಣದಲ್ಲಿ ₹1.5 ಕೋಟಿಯನ್ನು ಸಮಾಜಕ್ಕೆ ಬಿಡುಗಡೆ ಮಾಡಿಸಿದ್ದರು. ಆದರೆ, ಈಗ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರದಿಂದ ಬರಬೇಕಿದ್ದ ಬಾಕಿ ₹50 ಲಕ್ಷ ರು. ಅನುದಾನ ತಡೆಹಿಡಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಚೇಗೆ ನಡೆದ ಸಮಾಜದ ಸಾಮಾನ್ಯ ಸಭೆಯಲ್ಲಿ ಈಗಿರುವ ಸಮಿತಿಯೇ ಮುಂದುವರಿಸಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಆದರೆ, ಈಗ ಫೆ.20ರಂದು ನನ್ನ ಗೈರುಹಾಜರಾತಿಯಲ್ಲಿ ಸಭೆ ನಡೆಸಿ, ಬೇರೆಯೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಹುಚ್ಚಪ್ಪ, ಲಿಂಗಪ್ಪ, ನೀಲಕಂಠಪ್ಪ, ನಾಗರಾಜ್ ಮತ್ತಿತರರು ಇದ್ದರು.
- - -ಟಾಪ್ ಕೋಟ್
ನಾನು ಹಣ ದುರುಪಯೋಗ ಮಾಡಿಕೊಂಡಿದ್ದೇನೆ ಎಂದು ಆರೋಪ ಮಾಡಲಾಗುತ್ತಿದೆ. ಹಣ ದುರಪಯೋಗ ಮಾಡಿದ್ದರೆ ಅದನ್ನು ತನಿಖೆ ಮಾಡಲಿ. ಯಾವುದೇ ರೀತಿಯ ತನಿಖೆಗೆ ನಾನು ಸಿದ್ಧ- ಕೆ.ಅಜ್ಜಪ್ಪ, ತಾಲೂಕು ಅಧ್ಯಕ್ಷ, ಆರ್ಯ ಈಡಿಗ ಸಮಾಜ
- - -