ಆರ‍್ಯವೈಶ್ಯ ಸಮಾಜಕ್ಕೆ ಸರ್ಕಾರದಿಂದ ಯಾವುದೇ ನೆರವಿಲ್ಲ

| Published : Jul 22 2025, 12:15 AM IST

ಸಾರಾಂಶ

ಸರ್ಕಾರ ಆರ‍್ಯವೈಶ್ಯ ಸಮಾಜ ಮುಂದುವರೆದ ಜನಾಂಗವೆಂದು ಯಾವುದೇ ನೆರವು ನೀಡದಿರುವುದು ನೋವಿನ ಸಂಗತಿಯಾಗಿದ್ದು ಸರ್ಕಾರ ಮಾಡುವ ಎಲ್ಲಾ ಕಾರ್ಯಕ್ರಮಗಳನ್ನು ಆರ‍್ಯವೈಶ್ಯ ಮಹಾಸಭಾ ತಮ್ಮ ಜನಾಂಗಕ್ಕಾಗಿ ಮಾಡುವ ಜೊತೆಗೆ ತನ್ನ ಸೇವಾ ಕಾರ್ಯದಲ್ಲಿ ಶೇ.25ರಷ್ಟು ಇತರೆ ಸಮಾಜಕ್ಕೂ ಅನುಕೂಲ ಕಲ್ಪಿಸುತ್ತಿದೆ ಎಂದು ಆರ‍್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಸರ್ಕಾರ ಆರ‍್ಯವೈಶ್ಯ ಸಮಾಜ ಮುಂದುವರೆದ ಜನಾಂಗವೆಂದು ಯಾವುದೇ ನೆರವು ನೀಡದಿರುವುದು ನೋವಿನ ಸಂಗತಿಯಾಗಿದ್ದು ಸರ್ಕಾರ ಮಾಡುವ ಎಲ್ಲಾ ಕಾರ್ಯಕ್ರಮಗಳನ್ನು ಆರ‍್ಯವೈಶ್ಯ ಮಹಾಸಭಾ ತಮ್ಮ ಜನಾಂಗಕ್ಕಾಗಿ ಮಾಡುವ ಜೊತೆಗೆ ತನ್ನ ಸೇವಾ ಕಾರ್ಯದಲ್ಲಿ ಶೇ.25ರಷ್ಟು ಇತರೆ ಸಮಾಜಕ್ಕೂ ಅನುಕೂಲ ಕಲ್ಪಿಸುತ್ತಿದೆ ಎಂದು ಆರ‍್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ತಿಳಿಸಿದರು. ನಗರದ ಕೆಐಟಿ ಆಡಿಟೋರಿಯಂನಲ್ಲಿ ಕರ್ನಾಟಕ ಆರ‍್ಯವೈಶ್ಯ ಮಹಾಸಭಾ ಜಿಲ್ಲಾ ಸಮಿತಿ ವತಿಯಿಂದ ನಡೆದ ಮಹಾಸಭಾದ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ನೆರವು ನೀಡುತ್ತಿಲ್ಲ ಎಂದು ಸಮಾಜ ಬಾಂಧವರು ವಂಚಿತರಾಗಬಾರದೆಂದು ಅವರಿಗೆ ಮಹಾಸಭೆ ಬೆನ್ನಲುಬಾಗಿ ನಿಂತು ನೆರವು ನೀಡಿ ಸಮಾಜದಲ್ಲಿ ಹುಟ್ಟಿದ್ದು ಶಾಪವಲ್ಲ ವರ ಎಂದು ತೋರಿಸಿಕೊಡುತ್ತಿದೆ. ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಲು ಆರ‍್ಯವೈಶ್ಯ ಸಮಾಜದ ಕಾರ್ಯಕ್ರಮಗಳನ್ನು ಮನೆ-ಮನೆಗೆ ತಲುಪಿಸಲು ಹಾಗೂ ಸಮಾಜದ ಕುಂದುಕೊರತೆ ತಿಳಿದುಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ವಿಧವಾ ಮಾಶಾಸನ, ಅಂಗವಿಕಲ ಮಾಶಾಸನವನ್ನು ಆರ‍್ಯವೈಶ್ಯ ಮಾತ್ರವಲ್ಲದೇ ಎಲ್ಲರಿಗೂ ನೀಡುತ್ತಾ ಬಂದಿದೆ. ಕಳೆದ ಆರು ವರ್ಷಗಳಲ್ಲಿ 1400 ಲ್ಯಾಪ್‌ಟಾಪ್‌ಗಳನ್ನು ವಿತರಿಸಿದ್ದು 217 ಲ್ಯಾಪ್‌ಟಾಪ್ ಇತರೆ ಸಮಾಜಕ್ಕೂ ನೀಡಲಾಗಿದೆ. ನಮ್ಮ ಸಮಾಜದಿಂದ ರಾಜ್ಯದಲ್ಲಿ 81ಸಾವಿರ ಸಹಕಾರ ಸಂಘಗಳಿದ್ದು 9 ಸಹಕಾರ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿದೆ. ಸುಮಾರು 2.14ಲಕ್ಷ ಸದಸ್ಯರಿದ್ದು ಒಂದೂವರೆ ಲಕ್ಷ ಕೋಟಿ ವ್ಯವಹಾರ ನಡೆಸುತ್ತಿದೆ. ಸಮಾಜದ ಮಕ್ಕಳಿಗೆ ಓದಲು ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಆರ್ಯವೈಶ್ಯ ಆಸ್ಪತ್ರೆ, ಹಾಸ್ಟೆಲ್, ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ದಾಬಸ್‌ಪೇಟೆಯಲ್ಲಿ ಸುಮಾರು ಎಂಟು ಎಕರೆ ಭೂಮಿಯಲ್ಲಿ 70ಕೋಟಿ ವೆಚ್ಚದಲ್ಲಿ ಸಮಾಜದ ಮಕ್ಕಳಿಗೆ ಎಲ್‌ಕೆಜಿಯಿಂದ ಉನ್ನತ ಪದವಿವರೆಗೂ ವಿದ್ಯಾಭ್ಯಾಸ ಮಾಡಲು ಅನುಕೂಲ ಕಲ್ಪಿಸುತ್ತಿದ್ದೇವೆ. ವಾಸವಿ ಬ್ಯಾಂಕ್ ಪ್ರಾರಂಭಿಸುತ್ತಿದ್ದು ಮುಂದಿನ ಹತ್ತು ವರ್ಷಗಳಲ್ಲಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ವಾಸವಿ ಬ್ಯಾಂಕ್ ಕಾರ್ಯನಿರ್ವಹಿಸಲಿದೆ ಎಂದರು. ಶಾಸಕ ಕೆ. ಷಡಕ್ಷರಿ ಮಾತನಾಡಿ, ಸರ್ಕಾರ ಆರ‍್ಯ ವೈಶ್ಯ ಸಮಾಜವನ್ನು ಕಡೆಗಣಿಸಿಲ್ಲ. ಹಿಂದುಳಿದ ಎಲ್ಲಾ ವರ್ಗದವರಿಗೂ ಆರೋಗ್ಯ, ಶಿಕ್ಷಣ, ವಸತಿ ಕಲ್ಪಿಸಲಾಗಿದೆ. ಆದರೆ ವಾಸವಿ ಸಮುದಾಯ ಇತರ ಸಮುದಾಗಳಿಗಿಂತ ಭಿನ್ನವಾಗಿದ್ದು ತಮ್ಮ ವಂಶಪಾರಂಪರ್ಯವಾಗಿ ಬಂದಿರುವ ವ್ಯಾಪಾರವನ್ನು ಮುಂದುವರೆಸಿಕೊಂಡು ಆರ್ಥಿಕ ಬಲಿಷ್ಠರಾಗಿದ್ದಾರೆ. ಆರ‍್ಯವೈಶ್ಯ ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕೆಂದು ಕೆಲ ಮಾದರಿ ಯೋಜನೆಗಳನ್ನು ಹಾಕಿಕೊಂಡು ಜನರ ಏಳ್ಗೆ ಬಯಸುತ್ತಿರುವುದು ಶ್ಲಾಘನೀಯ ಎಂದರು. ಆರ‍್ಯವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಬಾಗೇಪಲ್ಲಿ ನಟರಾಜು ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಮಹಾಸಭಾ ಅನಾದಿ ಕಾಲದಿಂದಲೂ ಹತ್ತಾರು ಯೋಜನೆಗಳನ್ನು ಹಾಕಿಕೊಂಡು ಬಡವರು, ಅಶಕ್ತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದ ಅವರು ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಆರ‍್ಯವೈಶ್ಯ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಪೆನುಗೊಂಡ ವಾಸಿ ದೇವಸ್ಥಾನದ ಅಧ್ಯಕ್ಷ ಗೋವಿಂದರಾಜು, ತಾಲೂಕು ಗೌರವಾಧ್ಯಕ್ಷ ಜಿ.ಎನ್. ವಿಶ್ವನಾಥ್, ಉಪಾಧ್ಯಕ್ಷ ಕೆ.ಪಿ.ಪ್ರವೀಣ್, ಕಾರ್ಯದರ್ಶಿ ವಿಶ್ವನಾಥಬಾಬು, ನಿರ್ದೇಶಕರುಗಳಾದ ಪ್ರಕಾಶ್, ಸುನಯನ ಶ್ರೀನಾಥ್, ಸೌಜನ್ಯ ಪ್ರದೀಪ್ ಸೇರಿದಂತೆ ಸಮಾಜದ ಬಂಧುಗಳು ಭಾಗವಹಿಸಿದ್ದರು.