ಜನರ ದುಃಖಗಳನ್ನು ಕಡಿಮೆ ಮಾಡುವ ದಾರಿದೀಪವಾಗಿ: ಡಾ. ಸುಜಾತ ರಾಥೋಡ್

| Published : Apr 30 2025, 12:38 AM IST

ಸಾರಾಂಶ

ವೈದ್ಯ ವೃತ್ತಿ ಜಗತ್ತಿನ ಶ್ರೇಷ್ಠ ವೃತ್ತಿಯಾಗಿದೆ, ವೈದ್ಯರಾದವರು ಶಿಸ್ತು, ಸಂಯಮ, ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು, ನಿಮ್ಮ ನಗುಮೊಗದ ಸೇವೆ ರೋಗಿಗಳ ಶೇ. ೮೦ರಷ್ಟು ಕಾಯಿಲೆ ವಾಸಿಮಾಡುತ್ತದೆ ಎಂದು ತಿಳಿಸಿದರು.ಪ್ರಾಂಶುಪಾಲರಾದ ಡಾ. ಗಿರೀಶ್ ವಿ. ಪಾಟೀಲ್, ಮುಖ್ಯ ಆಡಳಿತಾಧಿಕಾರಿಗಳಾದ ನಂಜುಂಡೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೆ.ಆರ್. ಮಹೇಶ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜನರ ಸೇವೆ ಮಾಡುವ ಅವಕಾಶ ನಿಮಗೆ ಸಿಕ್ಕಿದೆ, ಹಣವೇ ಮುಖ್ಯವಲ್ಲ, ದೇಶದ, ಸಮಾಜದ ಆರೋಗ್ಯ ಕಾಪಾಡಿ, ಜನರ ದುಃಖಗಳನ್ನು ಕಡಿಮೆ ಮಾಡುವ ದಾರಿದೀಪಗಳಾಗಿ ಎಂದು ಬೆಂಗಳೂರಿನ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಬಿ.ಎಲ್. ಸುಜಾತ ರಾಥೋಡ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ೪ನೇ ಘಟಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ರಕ್ಷಣೆ ವಿತರಣಾ ವ್ಯವಸ್ಥೆಯು ಮನುಷ್ಯನ ಕೌಶಲ್ಯ ಮತ್ತು ಯಂತ್ರಗಳ ರೂಪದಲ್ಲಿ ಕಂಡುಬರುವ ತಂತ್ರಜ್ಞಾನದ ನಡುವೆ ಇರುವ ಅತ್ಯಂತ ಅದ್ಭುತವಾದ ಬಾಂಧವ್ಯವಾಗಿದೆ ಎಂದರು.

ನೀವು ಕೇವಲ ಪ್ರಿಸ್ಕ್ರಿಪ್ಷನ್ ವೈದ್ಯರಾಗದೆ, ರೋಗವನ್ನು ಗುರುತಿಸುವ ಮಾನವ ಸ್ವಭಾವದ ಹಿಂದೆ ಹೋಗುವ ವೈದ್ಯರಾಗಬೇಕು. ಭಾರತೀಯ ವೈದ್ಯರು ವಿಶ್ವದ ಅತ್ಯುತ್ತಮ ವೈದ್ಯರು ಎಂದು ಪ್ರಶಂಸಿಸಲ್ಪಡುತ್ತೇವೆ, ನಾವು ಭಾರತೀಯರು, ನಮ್ಮ ಸಂಸ್ಕಾರಗಳ ಮೂಲಕ ನಮ್ಮೊಳಗೆ ನಿರ್ಮಿಸಲಾದ ಬಹಳ ಮೌಲ್ಯಗಳನ್ನು ಹೊಂದಿದ್ದೇವೆ, ಆದ್ದರಿಂದ ಪ್ರಪಂಚ ಭಾರತೀಯ ವೈದ್ಯರನ್ನು ಗೌರವಿಸುತ್ತದೆ ಎಂದರು.

ಡಿಜಿಟಲ್ ಜಗತ್ತಿನಲ್ಲಿ ಉತ್ತಮ ಆರೋಗ್ಯ ಮತ್ತು ಸ್ವಾಸ್ಥ್ಯದ ರಾಯಭಾರಿಗಳಾಗುವತ್ತ ಮುನ್ನಡೆಯಿರಿ, ಆರೋಗ್ಯಕರ ಸಮಾಜವನ್ನು ಹೊಂದಲು ತಡೆಗಟ್ಟುವ ಮಾರ್ಗಗಳು ಯಾವುವು ಎಂಬುದನ್ನು ಗುರುತಿಸಲು ಕಲಿಯಿರಿ ಎಂದು ಕಿವಿಮಾತು ಹೇಳಿದರು.

ನೀವು ಕುಟುಂಬ ಮತ್ತು ಸ್ನೇಹಿತರಿಂದ ಸಜ್ಜಾಗುತ್ತಿರುವಂತೆ ಮತ್ತು ಬೆಂಬಲಿತರಾಗಿರುವುದರಿಂದ, ಯಾವಾಗಲೂ ಧೈರ್ಯದಿಂದಿರಿ, ಯಾವಾಗಲೂ ಸಹಾನುಭೂತಿಯಿಂದಿರಿ ಮತ್ತು ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಿಳಿದಿರಲಿ. ವೈದ್ಯೋ ನಾರಾಯಣನಂತೆ ನಮ್ಮನ್ನು ಪೂಜಿಸುತ್ತಿದ್ದ ಸಮಾಜ ,ಈಗ ನಮ್ಮ ಸಣ್ಣ ದೋಷಗಳಿಗೆ ನಮ್ಮನ್ನು ಹೊಡೆಯಲು ಸಿದ್ಧರಾಗಿದ್ದಾರೆ. ಆದ್ದರಿಂದ ಇವುಗಳನ್ನು ಗುರುತಿಸಿ ಅವರು ಹಿಂಸಾಚಾರವನ್ನು ಪ್ರಚೋದಿಸುವ ಸಂದರ್ಭಗಳನ್ನು ನಾವು ಮಾಡಿಕೊಡಬಾರದು. ರೋಗಿಗಳನ್ನು ಮೊದಲು ಮುಟ್ಟಿ ನಾಡಿ ಮಿಡಿತ ಗಮನಿಸಿ, ಭುಜದ ಮೇಲೆ ನೀವು ಸಾಂತ್ವನದ ಸ್ಪರ್ಶವನ್ನು ಹೊಂದಿ, ಅವರಿಗೆ ಧೈರ್ಯ ನೀಡಿ ಎಂದರು.

ಪದವಿ ಸ್ವೀಕಾರ ಇದು ನಿಮ್ಮ ಜೀವನದ ಪ್ರಮುಖ ಘಟ್ಟ, ಇಂತಯ ಸನ್ನಿವೇಶವು ನಿಮ್ಮ ಜೀವನದಲ್ಲಿ ಒಂದು ಬಾರಿ ಬರುವುದು, ಇಲ್ಲಿಂದ ನಿಮ್ಮ ಜೀವನ ವಿವಿಧ ಘಟ್ಟಗಳಲ್ಲಿ ಬದಲಾಗುತ್ತದೆ, ಜನರ ಸೇವೆ ಮಾಡುವ ಅವಕಾಶ ನಿಮಗೆ ಸಿಕ್ಕಿದೆ, ಹಣವೇ ಮುಖ್ಯವಲ್ಲ, ದೇಶದ, ಸಮಾಜದ ಆರೋಗ್ಯ ಕಾಪಾಡುತ್ತಾ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆಯಿರಿ ಎಂದು ಸಲಹೆ ನೀಡಿದರು.

ಚಾಮರಾಜನಗರ ವಿವಿ ಕುಲಪತಿ ಎಂ.ಆರ್.ಗಂಗಾಧರ್‌ ಮಾತನಾಡಿ, ಚಾಮರಾಜನಗರ ಜಿಲ್ಲೆ ಆರ್ಥಿಕವಾಗಿ ಹಿಂದುಳಿದಿದ್ದರೂ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಜಿಲ್ಲೆಯಲ್ಲಿ ಶೇ. ೮೦ರಷ್ಟು ಮಂದಿ ಗ್ರಾಮಾಂತರ ಪ್ರದೇಶದಲ್ಲಿ ವಾಸವಾಗಿದ್ದು, ಅವರಿಗೆ ನಿಮ್ಮ ಆರೋಗ್ಯ ಸೇವೆ ಸಿಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಮ್ಸ್ ಡೀನ್, ನಿರ್ದೇಶಕ ಡಾ.ಎಚ್.ಜಿ.ಮಂಜುನಾಥ್ ಮಾತನಾಡಿ, ವೈದ್ಯ ವೃತ್ತಿ ಜಗತ್ತಿನ ಶ್ರೇಷ್ಠ ವೃತ್ತಿಯಾಗಿದೆ, ವೈದ್ಯರಾದವರು ಶಿಸ್ತು, ಸಂಯಮ, ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು, ನಿಮ್ಮ ನಗುಮೊಗದ ಸೇವೆ ರೋಗಿಗಳ ಶೇ. ೮೦ರಷ್ಟು ಕಾಯಿಲೆ ವಾಸಿಮಾಡುತ್ತದೆ ಎಂದು ತಿಳಿಸಿದರು.

ಪ್ರಾಂಶುಪಾಲರಾದ ಡಾ. ಗಿರೀಶ್ ವಿ. ಪಾಟೀಲ್, ಮುಖ್ಯ ಆಡಳಿತಾಧಿಕಾರಿಗಳಾದ ನಂಜುಂಡೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೆ.ಆರ್. ಮಹೇಶ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

೨೦೧೯ನೇ ಬ್ಯಾಚ್ ನ ‘ಅಭ್ಯುದಯನ್ಸ್’ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ೧೫೦ ವಿದ್ಯಾರ್ಥಿಗಳ ಪೈಕಿ ೧೪೭ ವಿದ್ಯಾರ್ಥಿಗಳು ಪದವಿ ಪಡೆದರು.

ಡಾ. ಸಿ.ಜೆ. ಕೇಶವ್, ಡಾ. ಮೇಹಾ ಜೋಶಿಪುರ, ಡಾ. ಎನ್. ವಿನುತಾ. ಡಾ. ಪ್ರತೀಕ್ ಗೌಡ, ಡಾ. ಆರ್. ಸುಶ್ಮಿತ ಮತ್ತು ಡಾ. ಯು. ಸಹನಾ ಬ್ಯಾಚಿನ ಟಾಪರ್‌ಗಳಾಗಿ ಹೊರ ಹೊಮ್ಮಿದ್ದಾರೆ.

ಇದಲ್ಲದೇ ಹಲವಾರು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಆರ್.ಜಿ.ಯು.ಎಚ್.ಎಸ್ ರಾಜ್ಯ ಮಟ್ಟದ ಶ್ರೇಣಿಗಳನ್ನು ಪಡೆದಿರುತ್ತಾರೆ. ಡಾ. ಎನ್. ವಿನುತಾ, (ಮೈಕ್ರೋ ಬಯೋಲಜಿ ಇ.ಎನ್.ಟಿ) ಡಾ. ಎಂ. ಶ್ರೇಯಸ್, (ಆಪ್ತಲ್ ಮೋಲಾಜಿ) ಡಾ. ಮೇಹಾ ಜೋಶಿಪುರ (ಮೈಕ್ರೋ ಬಯೋಲಜಿ) ಡಾ. ಗೋವಿಂದ್ ಕೌಸ್ತುಭ್, (ಪೆಡ್ರಿಯಾಟಿಕ್) ಡಾ. ಪ್ರತೀಕ್‌ಗೌಡ ಹಾಗೂ ಡಾ. ಎಚ್.ಎಂ. ಸುಮ (ಪಿ.ಎಸ್.ಎಂ) ವಿಷಯದಲ್ಲಿ ಟಾಪರ್ ಗಳಾಗಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿಯು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ೨೦೨೪ರಲ್ಲಿ ಆರ್.ಜಿ.ಯು.ಎಚ್.ಎಸ್ ವಲಯ ಮತ್ತು ಅಂತರ ವಲಯದ ಥ್ರೋ ಬಾಲ್ ಚಾಂಪಿಯನ್ ಶಿಪ್ ಗೆದ್ದಿದ್ದಾರೆ. ೨೦೨೫ರಲ್ಲಿ ೨ನೇ ರನ್ನರ್‌ಅಪ್ ಆಗಿ ಹೊರ ಹೊಮ್ಮಿದ್ದಾರೆ. ಈ ತಂಡದಲ್ಲಿ ಡಾ. ಎ. ತೇಜಸ್ ನಾಯಕತ್ವವನ್ನು ವಹಿಸಿದ್ದರು. ಡಾ. ಕೀರ್ತಿ ಆರಾಧ್ಯ ಮತ್ತಿತರರು ಭಾಗವಹಿಸಿದ್ದರು.